ನವದೆಹಲಿ:ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮತ್ತೊಂದು ಜೀವ ಬೆದರಿಕೆ ಕರೆ ಬಂದಿದೆ. ಸೋಮವಾರ ಸಂಜೆ ಅವರ ದೆಹಲಿಯ ನಿವಾಸಕ್ಕೆ ದೂರವಾಣಿ ಕರೆ ಮಾಡಿದ ಆಗಂತುಕ ಜೀವ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ. ಇದಾದ ಬಳಿಕ ಸಚಿವರ ಕಚೇರಿಯು ದೆಹಲಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಿಂದಿನ ಬೆದರಿಕೆ ಕರೆಗಳು:ಇದಕ್ಕೂ ಮೊದಲು ಕೇಂದ್ರ ಸಚಿವರಿಗೆ ಬೆದರಿಕೆ ಕರೆಗಳು ಬಂದಿದ್ದವು. ಜನವರಿ 14ರಂದು ನಾಗ್ಪುರದಲ್ಲಿರುವ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಜಯೇಶ್ ಪೂಜಾರಿ ಅಲಿಯಾಸ್ ಕಾಂತ ಎಂಬ ವ್ಯಕ್ತಿ ಬೆದರಿಕೆ ಕರೆ ಮಾಡಿದ್ದ. 100 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದ ಆತ, ತಾನು ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡಿದ್ದ.
ಜಯೇಶ್ ಪೂಜಾರಿ ಕೊಲೆ ಪ್ರಕರಣದ ಅಪರಾಧಿಯಾಗಿದ್ದು, ಕರ್ನಾಟಕದ ಬೆಳಗಾವಿ ಜೈಲಿನಲ್ಲಿ ಈತ ಬಂಧಿಯಾಗಿದ್ದಾನೆ. ಭಯೋತ್ಪಾದನಾ ವಿರೋಧಿ ಕಾನೂನಾದ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಕೊಲೆ ಪ್ರಕರಣ ಅಪರಾಧಿ ಪೂಜಾರಿಗೆ ಮರಣದಂಡನೆ ಶಿಕ್ಷೆಯಾಗಿದ್ದು, ಬೆದರಿಕೆ ಕರೆಯನ್ನು ತಾನು ಮಾಡಿಲ್ಲ ಎಂದು ಆತ ತನ್ನ ಕೈವಾಡವನ್ನು ಅಲ್ಲಗಳೆದಿದ್ದ.
ಶನಿವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕಚೇರಿಗೆ ಮೂರು ಬೆದರಿಕೆ ಕರೆಗಳು ಬಂದಿದ್ದವು. ಕಚೇರಿಯ ಲ್ಯಾಂಡ್ಲೈನ್ ನಂಬರ್ಗೆ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿದ್ದರು. ಬೆಳಗ್ಗೆ 11.25, 11.32 ಮತ್ತು ಮಧ್ಯಾಹ್ನ 12.32ಕ್ಕೆ ಬಿಎಸ್‌ಎನ್‌ಎಲ್‌ನಿಂದ ಮೂರು ಕರೆಗಳು ಬಂದಿದ್ದವು.