ಕೂಚ್ಬೆಹಾರ್ : ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಅವರ ಕಾರಿನ ಮೇಲೆ ದಾಳಿ ನಡೆದಿರುವ ಘಟನೆ ಕೂಚ್ ಬೆಹಾರ್‌ನ ದಿನ್ಹಟಾದ ಬುರಿರ್‌ಹತ್ ಪ್ರದೇಶದಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ಕೇಂದ್ರ ಸಚಿವರ ಕಾರಿನ ಗಾಜು ಜಖಂಗೊಂಡಿದೆ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಮೇಲೆ ಕಲ್ಲು ತೂರಾಟ ನಡೆಸಿ ಬಾಂಬ್ ದಾಳಿ ನಡೆಸಿದ್ದಾರೆ ಎಂದು ಪ್ರಮಾಣಿಕ್ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ನಿಸಿತ್ ಪ್ರಮಾಣಿಕ್, ಪೊಲೀಸರಿಗೆ ಮಾಹಿತಿ ನೀಡಿ ನಾನು ಆ ಪ್ರದೇಶಕ್ಕೆ ತೆರಳಿದ್ದೆ. ಈ ರಾಜ್ಯದಲ್ಲಿ ಕೇಂದ್ರ ಸಚಿವರೂ ಅಸುರಕ್ಷಿತರಾಗಿದ್ದು, ಇಲ್ಲಿನ ಜನಸಾಮಾನ್ಯರ ಪರಿಸ್ಥಿತಿಯನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಎಂದು ಕಿಡಿಕಾರಿದ್ದಾರೆ. ಬಂಗಾಳದ ಜನರು ಇದನ್ನು ಒಪ್ಪಿಕೊಳ್ಳುವುದಿಲ್ಲ. ಈ ರಾಜಕೀಯ ಪರಿಸ್ಥಿತಿ ಮುಂದುವರಿದರೆ ಬಂಗಾಳದ ಪ್ರಜಾಪ್ರಭುತ್ವವು ಛಿದ್ರವಾಗುತ್ತದೆ. ಕಲ್ಲು ತೂರಾಟ ಮಾಡುವವರು ಮತ್ತು ಬಾಂಬ್ ಎಸೆದವರನ್ನು ಪೊಲೀಸರು ರಕ್ಷಿಸುತ್ತಿದ್ದಾರೆ ಎಂದು ಪ್ರಮಾಣಿಕ್ ಆರೋಪಿಸಿದ್ದಾರೆ. ಘಟನೆ ಬಳಿಕ ಈ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.