ವಾಷಿಂಗ್ಟನ್:ಕೇಂದ್ರ ಸರ್ಕಾರದ ಕೊನೆಯ ಬಜೆಟ್ ಸಿದ್ಧತಾ ಕಾರ್ಯಗಳು ನಡೆದಿದ್ದು, ಜನರಲ್ಲಿ ಮೋದಿ ಸರ್ಕಾರ ಅಂತಿಮ ಆಯವ್ಯಯದ ಮೇಲೆ ಭಾರೀ ನಿರೀಕ್ಷೆ ಮೂಡಿದೆ. ಹೀಗಾಗಿ ಬಜೆಟ್ನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ಇರಲಿದೆ. ದೇಶದ ಆರ್ಥಿಕತೆಗೆ ಸಿಕ್ಕಿರುವ ಆವೇಗವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಜೆಟ್ ರೂಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೊರೊನಾ ಸಾಂಕ್ರಾಮಿಕದ ಮಧ್ಯೆಯೂ ಭಾರತ ವಿಶ್ವದ 5 ಅಗ್ರ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಈ ಆರ್ಥಿಕ ಆವೇಗವನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಮುಂದಿರುವ ಸವಾಲು. ಹೀಗಾಗಿ ದೇಶದ ಅಭಿವೃದ್ಧ ಮತ್ತು ಆರ್ಥಿಕ ಶಕ್ತಿ ವೃದ್ಧಿಗೆ ಗಮನ ನೀಡುವುದು ಬಜೆಟ್ನ ತಿರುಳಾಗಿದೆ ಎಂದು ಸಚಿವೆ ಹೇಳಿದರು.
ವಾಷಿಂಗ್ಟನ್ ಮೂಲದ ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಷನ್‌ನಲ್ಲಿ ನಡೆದ ಸಂವಾದದಲ್ಲಿ ಕೇಂದ್ರ ಹಣಕಾಸು ಸಚಿವರು ಈ ಮಾಹಿತಿ ಹಂಚಿಕೊಂಡರು. ಬಜೆಟ್ನಲ್ಲಿ ಹಣದುಬ್ಬರ ಕಡಿತ ಮಾಡುವ ಬಗ್ಗೆ ಗಮನ ಹರಿಸಲಾಗುವುದು. ಇದರ ಜೊತೆಗೇ ಅಭಿವೃದ್ಧಿಯೂ ಪ್ರಮುಖವಾಗಿದೆ. ಹೀಗಾಗಿ ಎರಡನ್ನೂ ಸಮಪ್ರಮಾಣದಲ್ಲಿ ಸರಿದೂಗಿಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಬಜೆಟ್ ರೂಪಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಅವರು ಹೇಳಿದರು.