ಭೋಪಾಲ್(ಮಧ್ಯಪ್ರದೇಶ): ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡಿರುವ ತಾವರ್ಚಂದ್ ಗೆಹ್ಲೋಟ್ ತಮ್ಮ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ತೆರವಾದ ಸ್ಥಾನಕ್ಕೆ ಇದೀಗ ಉಪಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಾಗಿರುವ ಎಲ್. ಮುರುಗನ್ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಜುಲೈ 7ರಂದು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್. ಮುರುಗನ್ ಮುಂದಿನ ಆರು ತಿಂಗಳೊಳಗೆ ಲೋಕಸಭೆ ಅಥವಾ ರಾಜ್ಯಸಭೆಗೆ ಆಯ್ಕೆಯಾಗಬೇಕಾಗಿದೆ. ಇದೀಗ ಅವರು ಮಧ್ಯಪ್ರದೇಶದಿಂದ ಕಣಕ್ಕಿಳಿದಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಸಂಸದರಲ್ಲದ ಕಾರಣ ಮುರುಗನ್ ಮುಂದಿನ 6 ತಿಂಗಳಲ್ಲಿ ಲೋಕಸಭೆ ಅಥವಾ ರಾಜ್ಯಸಭೆಯಿಂದ ಆಯ್ಕೆಯಾಗಬೇಕಾಗಿದೆ.