ಸುಲ್ತಾನ್‌ಪುರ (ಉತ್ತರ ಪ್ರದೇಶ): ನಿಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರನ್ನು ಮದ್ಯವ್ಯಸನಿಗಳಿಗೆ ಮದುವೆ ಮಾಡಿ ಕೊಡಬೇಡಿ. ಈ ಮದ್ಯವ್ಯಸನಿಗಳಿಂತ ರಿಕ್ಷಾ ಚಾಲಕ ಅಥವಾ ಕಾರ್ಮಿಕರು ಉತ್ತಮ ವರ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಜನರಿಗೆ ಮನವಿ ಮಾಡಿದ್ದಾರೆ.
ಶನಿವಾರ ಲಂಬುವಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಡಿ-ಅಡಿಕ್ಷನ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಮದ್ಯವ್ಯಸನಿಗಳ ಜೀವಿತಾವಧಿ ತುಂಬಾ ಕಡಿಮೆ. ನಾನು ಸಂಸದನಾಗಿದ್ದು ನನ್ನ ಪತ್ನಿ ಶಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೂ, ನಮ್ಮ ಮಗನ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇನ್ನು ಸಾಮಾನ್ಯ ಜನರು ಏನು ಮಾಡುತ್ತಾರೆ?' ಎಂದು ತಮ್ಮ ವೈಯಕ್ತಿಕ ಅನುಭವ ಹಂಚಿಕೊಂಡರು.
ಇದನ್ನೂ ಓದಿ:ನಿಲ್ಲದ ಡ್ರಗ್ಸ್ ಅಮಲು.. ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು?
'ನನ್ನ ಮಗ ಆಕಾಶ್ ಕಿಶೋರ್ ತನ್ನ ಸ್ನೇಹಿತರೊಂದಿಗೆ ಸೇರಿ ಮದ್ಯ ಸೇವಿಸುವ ಅಭ್ಯಾಸ ಕಲಿತಿದ್ದ. ಬಳಿಕ ಅವನನ್ನು ಡಿ ಅಡಿಕ್ಷನ್ ಸೆಂಟರ್‌ಗೆ ಸೇರಿಸಲಾಯಿತು. ಕೆಟ್ಟ ಚಟವನ್ನು ಬಿಟ್ಟಿದ್ದಾನೆ ಎಂದು ಭಾವಿಸಿ ಆರು ತಿಂಗಳ ನಂತರ ಮದುವೆ ಮಾಡಲಾಯಿತು. ಆದರೆ ಮದುವೆಯ ನಂತರ ಅವನು ಮತ್ತೆ ಕುಡಿಯಲು ಪ್ರಾರಂಭಿಸಿದ. ಇದು ಅವನ ಸಾವಿಗೆ ಕಾರಣವಾಯಿತು. ಎರಡು ವರ್ಷಗಳ ಹಿಂದೆ ಅಂದ್ರೆ ಅಕ್ಟೋಬರ್ 19 ರಂದು ಆಕಾಶ್ ನಿಧನವಾದಾಗ ಅವನ ಮಗನಿಗೆ ಕೇವಲ ಎರಡು ವರ್ಷ ವಯಸ್ಸಾಗಿತ್ತು' ಎಂದು ಕೇಂದ್ರ ಸಚಿವರು ಭಾವುಕರಾದರು.
ಅಂದು ನನ್ನ ಮಗನನ್ನು ಉಳಿಸಲು ನನಗೆ ಸಾಧ್ಯವಾಗಲಿಲ್ಲ. ಇದರಿಂದ ಅವನ ಹೆಂಡತಿ ವಿಧವೆಯಾದಳು. ಇದರಿಂದ ನೀವೆಲ್ಲಾ ಪಾಠ ಕಳಿತುಕೊಳ್ಳಬೇಕು. ನಿಮ್ಮ ಹೆಣ್ಣುಮಕ್ಕಳನ್ನು ಮತ್ತು ಸಹೋದರಿಯರನ್ನು ನೀವು ರಕ್ಷಿಸಬೇಕು' ಎಂದು ಹೇಳಿದರು.