ನವದೆಹಲಿ:ರಾಜಸ್ಥಾನದ ಜೋಧಪುರದ ಜಲೋರಿ ಗೇಟ್ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದು, ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜಸ್ಥಾನದಲ್ಲಿ ಅಧಿಕಾರ ನಡೆಸುತ್ತಿರುವ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವರು, ಈ ಕೋಮು ಗಲಭೆ ಉಂಟಾಗಲು ರಾಜ್ಯ ಸರ್ಕಾರ ನೇರ ಹೊಣೆಯಾಗಿದೆ. ಕಲ್ಲು ತೂರಾಟ ಒಂದು ಪೂರ್ವಭಾವಿ ಯೋಜನೆ ಎಂದು ಆರೋಪ ಮಾಡಿದ್ದಾರೆ.
ಉದ್ರಿಕ್ತರು ಏಕಾಏಕಿ ಕಾರು ಧ್ವಂಸಗೊಳಿಸಿ, ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಘರ್ಷಣೆ ವೇಳೆ ರಾಜಸ್ಥಾನ ಪೊಲೀಸರು ಮತ್ತು ಸರ್ಕಾರ ಮೂಕ ಪ್ರೇಕ್ಷಕರಾಗಿ ಉಳಿದಿದ್ದು, ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು. ಇಂತಹ ಘಟನೆ ನಡೆಯುತ್ತಿದ್ದಾಗ ರಾಜ್ಯ ಸರ್ಕಾರ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದು ಆಕ್ರೋಶ ಹೊರಹಾಕಿದರು.