ನವದೆಹಲಿ:ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಮಹತ್ವದ ಮಸೂದೆಯನ್ನು ಇಂದು ರಾಜ್ಯಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ ರಾಮ್ ಮೇಘವಾಲ್ ಮಂಡಿಸಿದರು. ಬುಧವಾರ ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟ 128ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಭಾರಿ ಬೆಂಬಲ ವ್ಯಕ್ತವಾಗಿತ್ತು.
ಮಸೂದೆ ಮಂಡಿಸಿದ ಸಚಿವರು, ಕಳೆದ ಒಂಬತ್ತು ವರ್ಷಗಳಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಮಹಿಳೆಯರ ಹೆಸರಿನಲ್ಲಿ ಶೂನ್ಯ ಬ್ಯಾಲೆನ್ಸ್ ಜನ್‌ಧನ್ ಖಾತೆಯಿಂದ ಹಿಡಿದು ಶೌಚಾಲಯಗಳನ್ನು ನಿರ್ಮಿಸುವುದು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಸತಿ ನಿಲಯಗಳ ಹಂಚಿಕೆ ಮತ್ತು ಉಚಿತ ಅಡುಗೆ ಅನಿಲ ಮಹಿಳೆಯರ ಘನತೆ ಹೆಚ್ಚಿಸುವ ಕಾರ್ಯಕ್ರಮಗಳಾಗಿವೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ ಶೇ.68 ಪ್ರತಿಶತದಷ್ಟು ಮಹಿಳಾ ಫಲಾನುಭವಿಗಳೇ ಇದ್ದಾರೆ ಎಂದು ಹೇಳಿದರು.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿ ಎಸ್‌ಸಿ ಎಸ್‌ಟಿ ವರ್ಗಕ್ಕೂ ಅನ್ವಯಿಸುತ್ತದೆ. ಡಿಲಿಮಿಟೇಶನ್ ಆಯೋಗವು ಮಹಿಳೆಯರಿಗೆ ಎಷ್ಟು ಸ್ಥಾನ ನೀಡಬೇಕು ಎಂಬುದನ್ನು ನಿರ್ಧರಿಸುತ್ತದೆ ಎಂದು ಮೇಘವಾಲ್ ಹೇಳಿದರು. ಮೇಲ್ಮನೆಯಲ್ಲಿ ವಿಧೇಯಕ ಮಂಡಿಸಿದ ಕೇಂದ್ರ ಸಚಿವರು, ಮಸೂದೆ ಅಂಗೀಕಾರವಾದ ಕೂಡಲೇ ಜನಗಣತಿ ಮತ್ತು ಡಿಲಿಮಿಟೇಶನ್ ನಡೆಯಲಿದೆ ಎಂದರು.
ನಿನ್ನೆ, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಪರವಾಗಿ 454 ಸದಸ್ಯರು ಮತ ಚಲಾಯಿಸಿದರೆ, ಅಸಾದುದ್ದೀನ್ ಒವೈಸಿ ಮತ್ತು ಇಮ್ತಿಯಾಜ್ ಜಲೀಲ್ ವಿರುದ್ಧವಾಗಿ ಮತ ಚಲಾಯಿಸಿದ್ದರು.