ಕೋಲ್ಕತ್ತಾ( ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಕಾವು ಏರುತ್ತಲೇ ಇದೆ. ಈಗಾಗಲೇ ಮೂರು ಹಂತದ ಮತದಾನ ಮುಕ್ತಾಯವಾಗಿದ್ದು, ಇನ್ನೂ ಐದು ಹಂತದ ಚುನಾವಣೆ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಟಿಎಂಸಿ, ಬಿಜೆಪಿ, ಕಾಂಗ್ರೆಸ್ ಹಾಗೂ ಎಡಪಕ್ಷಗಳ ನಾಯಕರು ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಹೈವೋಲ್ಟೇಜ್ ಬಂಗಾಳ ಕಣದಲ್ಲಿ ಬಿಜೆಪಿ ಈ ಬಾರಿ ಅಧಿಕಾರ ಹಿಡಿದೇ ತೀರಬೇಕು ಎಂಬ ಉಮೇದಿನಲ್ಲಿದೆ. ಹೀಗಾಗಿ ಕೇಂದ್ರ ಗೃಹ ಸಚಿವರು ಹಾಗೂ ಹಿಂದಿನ ಅಧ್ಯಕ್ಷರಾಗಿರುವ ಅಮಿತ್ ಶಾ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಹೌರಾದ ದೋಮ್ಜೂರ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಾಜಿಬ್ ಬ್ಯಾನರ್ಜಿ ಪರ ಬಿರುಸಿನ ಪ್ರಚಾರ ನಡೆಸಿದರು.
ಮತ್ತೊಂದೆಡೆ ಅಮಿತ್ ಶಾ ಅವರು, ಕಾರ್ಯಕರ್ತರ ಮನೆಯಲ್ಲಿ ಭೋಜನ ಮಾಡುವ ತಮ್ಮ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ. ಇಂದೂ ಕೂಡಾ ಬಡ ಕಾರ್ಯಕರ್ತರೊಬ್ಬರ ಮನೆಯಲ್ಲಿ ಊಟ ಸವಿದು ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದರು.