ನವದೆಹಲಿ:ಉಕ್ರೇನ್-ರಷ್ಯಾ ನಡುವಿನ ಬಿಕ್ಕಟ್ಟಿನಿಂದಾಗಿ ಅಲ್ಲಿ ವಿದ್ಯಾಭ್ಯಾಸಕ್ಕಾಗಿ ತೆರಳಿರುವ ಭಾರತೀಯ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದು, ಅವರನ್ನ ಸುರಕ್ಷಿತವಾಗಿ ಕರೆತರುವ ಕೆಲಸದಲ್ಲಿ ಕೇಂದ್ರ ಸರ್ಕಾರ ಮಗ್ನವಾಗಿದೆ. ಇದೇ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಧ್ಯಮಗೋಷ್ಟಿ ನಡೆಸಿ ಮಹತ್ವದ ಮಾಹಿತಿ ನೀಡಿದರು.
ಕಳೆದ 24 ಗಂಟೆಗಳಲ್ಲಿ 15 ವಿಮಾನಗಳಲ್ಲಿ 2,900 ಭಾರತೀಯರು ತಾಯ್ನಾಡಿಗೆ ವಾಪಸ್ ಆಗಿದ್ದು, ಇಲ್ಲಿಯವರೆಗೆ 13,300 ಜನರನ್ನ ಸುರಕ್ಷಿತವಾಗಿ ಕರೆತರಲಾಗಿದೆ ಎಂದರು. ಮುಂದಿನ 24 ಗಂಟೆಯಲ್ಲಿ ಉಕ್ರೇನ್ನಿಂದ ಭಾರತಕ್ಕೆ 13 ವಿಮಾನಗಳು ವಾಪಸ್ ಆಗಲಿದ್ದು, ಇದರಲ್ಲಿ ಭಾರತೀಯ ವಾಯುಪಡೆಯ ಮೂರು ವಿಮಾನಗಳು ಸಹ ಸೇರಿಕೊಂಡಿವೆ ಎಂಬ ಮಾಹಿತಿ ಹಂಚಿಕೊಂಡರು.
ಜನವರಿ ತಿಂಗಳಿಂದಲೂ ಉಕ್ರೇನ್-ರಷ್ಯಾ ನಡುವಿನ ಬಿಕ್ಕಟ್ಟಿನ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಫೆ. 15ರಂದು ನಾವು ಮೊದಲ ಪ್ರಕಟಣೆ ಹೊರಡಿಸಿದ್ದೆವು. ರಷ್ಯಾ ಭಾಷೆ ಮಾತನಾಡುವ ನಾಲ್ಕು ತಂಡಗಳನ್ನ ಉಕ್ರೇನ್ನ ಹತ್ತಿರದ ದೇಶಗಳಿಗೆ ಕಳುಹಿಸಿದ್ದು, ಭಾರತೀಯರ ರಕ್ಷಣೆಯಲ್ಲಿ ಭಾಗಿಯಾಗುವಂತೆ ಸೂಚನೆ ನೀಡಿದ್ದೆವು. ಮಾರ್ಚ್ 4ರ ವೇಳೆಗೆ ಉಕ್ರೇನ್ನಿಂದ 16,000 ನಾಗರಿಕರನ್ನ ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆಂದು ಗೃಹ ಸಚಿವ ಅಮಿತ್ ಶಾ ಅಂಕಿ-ಅಂಶ ತಿಳಿಸಿದರು.