ಲೌರಿಯಾ (ಬಿಹಾರ):ನಿತೀಶ್ ಕುಮಾರ್ ತಮ್ಮ ರಾಜಕೀಯ ಲಾಭಕ್ಕಾಗಿ ಅಂದ್ರೆ, ಪ್ರಧಾನಿಯಾಗುವ ಕನಸಿಗಾಗಿ ಕಾಂಗ್ರೆಸ್ನೊಂದಿಗೆ ಕೈಜೋಡಿಸಿದ್ದಾರೆ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ''ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಬಿಹಾರದ ಮುಖ್ಯಮಂತ್ರಿಯಾಗಿಸಲು ಜೆಡಿಯು ವರಿಷ್ಠರು ರಹಸ್ಯವಾಗಿ ಒಪ್ಪಿಕೊಂಡಿದ್ದಾರೆ ಎಂದು ಅಮಿತ್ ಶಾ ಹೇಳಿದರು.
ನಿತೀಶ್ ಕುಮಾರ್‌ಗೆ ಸವಾಲು ಹಾಕಿ ಶಾ:ಪಶ್ಚಿಮ ಚಂಪಾರಣ್ ಜಿಲ್ಲೆಯ ಲೌರಿಯಾದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ನಿತೀಶ್ ಕುಮಾರ್ ಅವರು ಆ ರಹಸ್ಯ ಒಪ್ಪಂದವನ್ನು ಯಾವಾಗ ಬಹಿರಂಗವಾಗಿ ತಿಳಿಸುತ್ತಾರೆ ಎಂಬುದನ್ನು ಘೋಷಿಸಲಿ ಎಂದ ಅವರು, ನಾನು ರಹಸ್ಯ ಒಪ್ಪಂದದ ವಿಷಯದ ಕುರಿತು ಮಾತನಾಡಲು ಬಯಸುತ್ತೇನೆ. ಈ ಬಗ್ಗೆ ನಿತೀಶ್ ಕುಮಾರ್‌ಗೆ ಸವಾಲು ಹಾಕಲು ಬಯಸುತ್ತೇನೆ ಎಂದರು.
ಅವರು ಲಾಲೂ ಜಿ ಅವರ ಮಗನನ್ನು (ತೇಜಸ್ವಿ ಯಾದವ್) ಮುಖ್ಯಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಿಮಗೆ ತಿಳಿದಿದೆಯೇ? ಆದರೆ, ನಿತೀಶ್ ಅವರು ಈ ಬಗ್ಗೆ ಪ್ರಸ್ತಾಪವನ್ನು ಮಾಡಲಿಲ್ಲ. ಪ್ರಜಾಪ್ರಭುತ್ವದಲ್ಲಿ ಪಾರದರ್ಶಕತೆ ಇರಬೇಕು ಎಂದು ನಾನು ನಿತೀಶ್ ಅವರನ್ನು ಕೇಳುತ್ತೇನೆ. ನೀವು ಲಾಲೂ ಅವರ ಪುತ್ರನನ್ನು ಮುಖ್ಯಮಂತ್ರಿ ಮಾಡುವ ಭರವಸೆ ನೀಡಿದ್ದರೆ, ಬಿಹಾರದಲ್ಲಿ ಮತ್ತೊಮ್ಮೆ 'ಜಂಗಲ್ ರಾಜ್' ಸ್ಥಾಪಿಸುವ ವಿಚಾರವನ್ನು ಘೋಷಣೆ ಮಾಡಬೇಕು ಎಂದು ಶಾ ಸವಾಲು ಹಾಕಿದರು.
'ಜಂಗಲ್ ರಾಜ್' ಆಗಿಸಲು ಹೊರಟ ನಿತೀಶ್: ಇನ್ನೂ ಬಾಲ್ಮೀಕಿ ನಗರ ಲೋಕಸಭಾ ಕ್ಷೇತ್ರದಲ್ಲಿ ಮಾತನಾಡಿದ ಶಾ, ನಿತೀಶ್ ಕುಮಾರ್ ಅವರು ಬಿಹಾರವನ್ನು 'ಜಂಗಲ್ ರಾಜ್' ಆಗಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು. ಜಯಪ್ರಕಾಶ್ ನಾರಾಯಣ್ ಅವರ ಕಾಲದಿಂದಲೂ ನಿತೀಶ್ ಕುಮಾರ್ ಕಾಂಗ್ರೆಸ್ ಮತ್ತು ಜಂಗಲ್ ರಾಜ್ ವಿರುದ್ಧ ಹೋರಾಡಿದ್ದರು. ಈಗ ಜಂಗಲ್ ರಾಜ್‌ನ ಪ್ರವರ್ತಕ ಲಾಲೂ ಪ್ರಸಾದ್ ಅವರ ಮಡಿಲಲ್ಲಿ ಹಾಗೂ ಸೋನಿಯಾ ಅವರ ಪಾದದ ಮೇಲೆ ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದರು.