ಖಮ್ಮಂ (ತೆಲಂಗಾಣ) :ಚುನಾವಣಾ ಹೊಸ್ತಿಲಲ್ಲಿರುವ ತೆಲಂಗಾಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚುನಾವಣಾ ಕಹಳೆ ಮೊಳಗಿಸಿದ್ದಾರೆ. ಕಾಂಗ್ರೆಸ್ 4 ಜಿ, ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) 2 ಜಿ, ಅಸಾದುದ್ದೀನ್ ಓವೈಸಿಯ ಎಐಎಂಐಎಂ 3ಜಿ ಪಕ್ಷ ಎಂದು ಜರಿದಿದ್ದಾರೆ.
ಇಲ್ಲಿನ ಖಮ್ಮಂನಲ್ಲಿ ನಡೆದ ರೈತು ಗೋಸಾ-ಬಿಜೆಪಿ ಭರೋಸಾ ಸಮಾವೇಶದಲ್ಲಿ ಮಾತನಾಡಿದ ಚುನಾವಣಾ ಚಾಣಕ್ಯ ಅಮಿತ್ ಶಾ, ಕಾಂಗ್ರೆಸ್ ಪಕ್ಷ 4ಜಿ ಪಕ್ಷವಾಗಿದೆ. ಅಂದರೆ ನಾಲ್ಕು ತಲೆಮಾರಿನ ಪಕ್ಷ, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಈಗ ರಾಹುಲ್ ಗಾಂಧಿ ಅವರ ನೆರಳಿನಲ್ಲಿ ನಡೆಯುತ್ತಿದೆ. ಅದೇ ರೀತಿ ಅಧಿಕಾರದಲ್ಲಿರುವ ಬಿಆರ್‌ಎಸ್ 2ಜಿ ಪಕ್ಷವಾಗಿದೆ. ಸಿಎಂ ಕೆ ಚಂದ್ರಶೇಖರ್ ಮತ್ತು ಅವರ ಪುತ್ರ ಕೆಟಿ ರಾಮರಾವ್ ಅವರನ್ನೊಳಗೊಂಡಿದೆ. ಈ ಬಾರಿ 2ಜಿ ಅಥವಾ 4ಜಿ ಪಕ್ಷಗಳು ಗೆಲ್ಲುವುದಿಲ್ಲ. ಕಾರಣ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಮಯ ಇದಾಗಿದೆ ಎಂದು ವಿಶ್ವಾಸದ ಮಾತನ್ನಾಡಿದರು.
ಇನ್ನು, ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) 3 ಜಿ ಪಕ್ಷವಾಗಿದೆ. ಇವರ ಕುಟುಂಬದ ಮೂವರಿಗಾಗಿಯೇ ಪಕ್ಷವನ್ನು ನಡೆಸಲಾಗುತ್ತಿದೆ. ಅಧಿಕಾರಕ್ಕಾಗಿ ಅಸಾದುದ್ದೀನ್ ಓವೈಸಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಇದು ಸೈದ್ಧಾಂತಿಕ ವೈರುಧ್ಯ ಎಂದು ಟೀಕಿಸಿದರು.
ದೋಸ್ತಿ ಆರೋಪ ಸುಳ್ಳು:ರಾಜ್ಯದಲ್ಲಿ ಅಧಿಕಾರ ಹಿಡಿಯುವ ಸಲುವಾಗಿ ಬಿಜೆಪಿ, ಆಡಳಿತಾರೂಢ ಬಿಆರ್‌ಎಸ್ ಜೊತೆಗೆ ದೋಸ್ತಿ ಮಾಡಿಕೊಂಡಿದೆ ಎಂಬ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, ಚುನಾವಣೆ ನಂತರ ಬಿಜೆಪಿ ಮತ್ತು ಬಿಆರ್‌ಎಸ್ ಒಂದಾಗುತ್ತವೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. ಆದರೆ, ಬಿಜೆಪಿ ಯಾವುದೇ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಏಕಾಂಗಿಯಾಗಿ ಎಲೆಕ್ಷನ್ ಎದುರಿಸಲಿದೆ. ಕೆಸಿಆರ್ ಮತ್ತು ಅಸಾದುದ್ದೀನ್ ಓವೈಸಿ ಅವರ ಸಖ್ಯ ಬಿಜೆಪಿಗೆ ಎಂದಿಗೂ ಬೇಕಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಿಎಂ ಕೆಸಿಆರ್ ವಿರುದ್ಧ ಟೀಕೆ ನಡೆಸಿದ ಗೃಹ ಸಚಿವರು, ಕಳೆದ 9 ವರ್ಷಗಳಿಂದ ಓವೈಸಿ ಜೊತೆ ಸಂಧಾನ ಮಾಡಿಕೊಂಡು ತೆಲಂಗಾಣ ಮುಕ್ತಿ ಸಂಗ್ರಾಮದ ಹೋರಾಟಗಾರರ ಕನಸುಗಳನ್ನು ಚಿವುಟಿ ಹಾಕಿದ್ದೀರಿ. ಇಲ್ಲಿನ ಸಿಎಂ ಸ್ವಜನಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಕೆಸಿಆರ್ ಅವರ ನಂತರ ತಮ್ಮ ಕೆಟಿಆರ್ ರಾಜ್ಯವನ್ನು ಮುನ್ನಡೆಸಬೇಕೆಂಬ ಬಯಕೆ ಹೊಂದಿದ್ದಾರೆ. ಆದರೆ, ಮುಂಬರುವ ಚುನಾವಣೆಯಲ್ಲಿ ಇದೆಲ್ಲವೂ ಉಲ್ಟಾ ಆಗಲಿದೆ ಎಂದು ಭವಿಷ್ಯ ನುಡಿದರು.
ಈ ವರ್ಷದ ಕೊನೆಯಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಬಿಜೆಪಿ, ಆಡಳಿತಾರೂಢ ಬಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.
ಇದನ್ನೂ ಓದಿ:ರಾಜಕೀಯ ಸೇಡು ತೀರಿಸಿಕೊಳ್ಳುವ ಹುನ್ನಾರ: ವಿಚಾರಣಾ ಆಯೋಗ ರಚನೆಗೆ ಬೊಮ್ಮಾಯಿ ಕಿಡಿ