ಮೆಹ್ಸಾನ (ಗುಜರಾತ್):ಕೊರೊನಾಜನಕ ಆಪಾದನೆ ಹೊತ್ತಿರುವ ಚೀನಾದಲ್ಲಿ ಮತ್ತೊಂದು ವೈರಸ್ ವಕ್ಕರಿಸಿದೆ. ವೈರಸ್ನಿಂದಾಗಿ ಜನರು ಅನಾರೋಗ್ಯಕ್ಕೀಡಾಗುತ್ತಿದ್ದು, ಅಲ್ಲಿನ ಐಸಿಯುಗಳು ಭರ್ತಿಯಾಗುತ್ತಿವೆ. ದೇಶದ ಮೇಲೂ ಅದರ ವಕ್ರದೃಷ್ಟಿ ಬೀಳುವ ಅಪಾಯವಿದೆ. ಡ್ರ್ಯಾಗನ್ ರಾಷ್ಟ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಚೀನಾದಲ್ಲಿ ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಇನ್ಫ್ಲುಯೆಂಜಾ ವೈರಸ್ ಜ್ವರದ ಪ್ರಕರಣಗಳು ವಿಪರೀತವಾಗಿವೆ. ವಿಶೇಷವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಶನಿವಾರ ತಿಳಿಸಿದರು.
ಅಗತ್ಯ ಕ್ರಮಕ್ಕೆ ಸಜ್ಜು:ಚೀನಾದಲ್ಲಿ ಹೆಚ್ಚುತ್ತಿರುವ ನ್ಯುಮೋನಿಯಾ ಪ್ರಕರಣಗಳನ್ನು ಐಸಿಎಂಆರ್ ಮತ್ತು ಆರೋಗ್ಯ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿದೆ. ದೇಶಕ್ಕೆ ಇದರಿಂದ ಏನಾದರೂ ಸಮಸ್ಯೆ ಇದೆಯಾ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಈ ಕುರಿತು ಅಗತ್ಯ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಗುಜರಾತ್ನ ಮೆಹ್ಸಾನದಲ್ಲಿ ವೀಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚೀನಾದಲ್ಲಿ ಕಂಡುಬಂದಿರುವ ಇನ್ಫ್ಲುಯೆಂಜಾ, ಭಾರತದ ಮೇಲೆ ಪರಿಣಾಮ ಬೀರಿದಲ್ಲಿ ಅದನ್ನು ಎದುರಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಯಾವುದೇ ರೀತಿಯ ತುರ್ತುಸ್ಥಿತಿಯನ್ನೂ ತಡೆಯುವ ಶಕ್ತಿ ನಮ್ಮ ವ್ಯವಸ್ಥೆಗಿದೆ. ಚೀನೀ ಮಕ್ಕಳಲ್ಲಿ H9N2 ಮತ್ತು ಉಸಿರಾಟದ ಕಾಯಿಲೆಯು ಹೆಚ್ಚಾಗುತ್ತಿದೆ. ಸಮೂಹಗಳಲ್ಲಿ ಇದು ಏಕಾಏಕಿ ಹರಡುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.
ವೈರಸ್ ಭಾರತದ ಮೇಲೆ ಪರಿಣಾಮ ಬೀರದು:ಆರೋಗ್ಯ ಸಚಿವಾಲಯವು ಶುಕ್ರವಾರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಇನ್ಫ್ಲುಯೆಂಜಾ ಜ್ವರದ ಪ್ರಕರಣಗಳು, ಚೀನಾದ ದಕ್ಷಿಣ ಮತ್ತು ಉತ್ತರ ಪ್ರಾಂತ್ಯಗಳಲ್ಲಿ ಹೆಚ್ಚುತ್ತಿರುವುದು ಜಾಗತಿಕ ಕಳವಳ ಹೆಚ್ಚಿಸಿದೆ. ಭಾರತ ಇದನ್ನು ಎದುರಿಸುವ ಶಕ್ತಿ ಹೊಂದಿದೆ ಎಂದು ಹೇಳಿತ್ತು. ಕೊರೊನಾದಂತಹ ವೈರಸ್ ವಿರುದ್ಧ ಹೋರಾಡಿದ ಅನುಭವ ನಮಗಿದೆ. ದೇಶದ ಮೇಲೆ ಈಗಿನ ವೈರಸ್ ಪರಿಣಾಮ ಬೀರದು. ಹಾಗೊಂದು ವೇಳೆ ದಾಳಿ ಮಾಡಿದಲ್ಲಿ ನಮ್ಮ ವ್ಯವಸ್ಥೆ ಪ್ರತಿರೋಧ ಒಡ್ಡಲಿದೆ ಎಂದು ಹೇಳಿತ್ತು.
ಮಕ್ಕಳ ಮೇಲೆ ದಾಳಿ ಮಾಡುತ್ತಿರುವ ಹೊಸ ವೈರಸ್ ವಿಶೇಷವೇನಲ್ಲ. ಅದು ಹವಾಮಾನ ಬದಲಾವಣೆ ಮತ್ತು ಋತುಮಾನಗಳಿಗೆ ಬರುವಂಥದ್ದಾಗಿದೆ. ಯಾವುದೇ ಅಸಾಮಾನ್ಯ ಅಥವಾ ಹೊಸ ವೈರಸ್ ಇದೇನಲ್ಲ. ಅಪಾಯಕಾರಿ ಕುರುಹು ಪತ್ತೆಯಾಗಿಲ್ಲ ಎಂದು ಚೀನಾ ಸರ್ಕಾರ ಹೇಳಿದೆ. ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿರುವ ಇಮ್ಯುನಿಟಿ ಸಮಸ್ಯೆಯಿಂದಾಗಿ ಅಷ್ಟೆ ಎಂದಿದೆ.
ಇದನ್ನೂ ಓದಿ:ಚೀನಾದಲ್ಲಿ ಮತ್ತೊಂದು ನಿಗೂಢ ವೈರಸ್: ನ್ಯುಮೋನಿಯಾ ರೋಗಲಕ್ಷಣಗಳಿಂದ ಬಳಲುತ್ತಿರುವ ಶಾಲಾ ಮಕ್ಕಳು