ಔರಂಗಾಬಾದ್(ಮಹಾರಾಷ್ಟ್ರ): ಔರಂಗಾಬಾದ್ ಅನ್ನು ಛತ್ರಪತಿ ಸಂಭಾಜಿನಗರ ಎಂದು ಮತ್ತು ಉಸ್ಮಾನಾಬಾದ್ ಅನ್ನು ಧರಾಶಿವ್ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಶುಕ್ರವಾರ ಹಸಿರು ನಿಶಾನೆ ತೋರಿದೆ. ಈ ವಿಚಾರವನ್ನು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಔರಂಗಾಬಾದ್ ಮೊಘಲ್ ದೊರೆ ಔರಂಗಜೇಬ್‌ನ ಹೆಸರು ಹಾಗೂ ಆದರೆ, ಉಸ್ಮಾನಾಬಾದ್ 20ನೇ ಶತಮಾನದ ಹೈದರಾಬಾದ್‌ನ ರಾಜಪ್ರಭುತ್ವದ ಆಡಳಿತಗಾರನ ಹೆಸರನ್ನು ಇಡಲಾಗಿತ್ತು.
ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮರಾಠ ಸಾಮ್ರಾಜ್ಯದ 2ನೇ ದೊರೆ. ಆದರೆ, 1689ರಲ್ಲಿ ಔರಂಗಜೇಬನ ಆದೇಶದ ಮೇರೆಗೆ ಸಂಭಾಜಿ ಮಹಾರಾಜನನ್ನು ಗಲ್ಲಿಗೇರಿಸಲಾಗಿತ್ತು. ಕೆಲವು ವಿದ್ವಾಂಸರ ಪ್ರಕಾರ ಧಾರಾಶಿವ್, ಒಸ್ಮಾನಾಬಾದ್ ಬಳಿಯ ಗುಹೆ ಸಂಕೀರ್ಣದ ಹೆಸರು. ಇದು 8ನೇ ಶತಮಾನಕ್ಕಿಂತ ಹಿಂದಿನದು. ಹಿಂದೂ ಬಲಪಂಥೀಯ ಸಂಘಟನೆಗಳು ಎರಡು ನಗರಗಳ ಹೆಸರನ್ನು ಮರುನಾಮಕರಣ ಮಾಡುವಂತೆ ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದವು.
ಫಡ್ನವೀಸ್ ಅವರು ಫೆಬ್ರವರಿ 24 ರಂದು ಗೃಹ ಸಚಿವಾಲಯದಿಂದ ರಾಜ್ಯ ಸಾಮಾನ್ಯ ಆಡಳಿತ ಇಲಾಖೆಯ ಉಪ ಕಾರ್ಯದರ್ಶಿಗೆ ಎರಡು ಪತ್ರಗಳನ್ನು ಟ್ವೀಟ್ ಮಾಡಿದ್ದಾರೆ. ಈ ಎರಡು ಮಧ್ಯ ಮಹಾರಾಷ್ಟ್ರ ನಗರಗಳ ಹೆಸರನ್ನು ಬದಲಾಯಿಸಲು ಕೇಂದ್ರಕ್ಕೆ ಯಾವುದೇ ವಿರೋಧವಿಲ್ಲ ಎಂದು ಪತ್ರಗಳಲ್ಲಿ ತಿಳಿಸಲಾಗಿದೆ. ಈ ನಿರ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಫಡ್ನವೀಸ್ ಧನ್ಯವಾದ ತಿಳಿಸಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ರಾಜ್ಯ ಸರ್ಕಾರ ನೀಡಿದ ಭರವಸೆ ಈಡೇರಿಸಿದೆ ಎಂದು ಅವರು ಹೇಳಿದರು.
ಕ್ಯಾಬಿನೆಟ್ ನಿರ್ಧಾರ:ಮುಖ್ಯವಾಗಿ ಔರಂಗಾಬಾದ್ ಅನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡುವುದು ಮತ್ತು ಉಸ್ಮಾನಾಬಾದ್ ಅನ್ನು ಧರಾಶಿವ್ ಎಂದು ಮರುನಾಮಕರಣ ಮಾಡುವುದು ಉದ್ಧವ್ ಠಾಕ್ರೆ ವಿರುದ್ಧ ಶಿಂಧೆಯವರ ಬಂಡಾಯದ ನಂತರ ಕಳೆದ ಜೂನ್‌ನಲ್ಲಿ ಪತನಗೊಂಡ ಶಿವಸೇನೆ - ಎನ್‌ಸಿಪಿ - ಕಾಂಗ್ರೆಸ್ ಸರ್ಕಾರದ ಕ್ಯಾಬಿನೆಟ್ ನಿರ್ಧಾರವಾಗಿತ್ತು. ಶಿಂಧೆ ನೇತೃತ್ವದ ಹೊಸ ಸರ್ಕಾರ ಸಂಪುಟ ನಿರ್ಧಾರವನ್ನು ರದ್ದುಪಡಿಸಿ ಹೊಸ ನಿರ್ಧಾರವನ್ನು ತೆಗೆದುಕೊಂಡಿತು.