ನವದೆಹಲಿ: ಉಕ್ರೇನ್‌ನ 2ನೇ ದೊಡ್ಡ ನಗರ ಖಾರ್ಕೀವ್‌ನಲ್ಲಿ ನಿನ್ನೆ ರಷ್ಯಾದ ದಾಳಿಗೆ ಬಲಿಯಾದ ಹಾವೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್ ಎಸ್.ಜಿ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ವಾಪಸ್ ತರುವುದಕ್ಕೆ ಕೇಂದ್ರ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಸಿಗುತ್ತಿಲ್ಲ.
ಮೃತ ನವೀನ್ ಸಹೋದರನಿಗೆ ಫೋನ್ ಮಾಡಿ ಉಕ್ರೇನ್‌ನಲ್ಲಿರುವ ಸದ್ಯದ ಪರಿಸ್ಥಿತಿ ಬಗ್ಗೆ ರಾಯಭಾರಿ ಕಚೇರಿ ಅಧಿಕಾರಿಗಳು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ರಾಯಭಾರಿ ಕಚೇರಿಯ ಜಂಟಿ ಆಯುಕ್ತ ನಿಮೇಶ್ ಭಾರೋಟ್ ಅವರು, ನವೀನ್ ಪಾರ್ಥಿವ ಶರೀರವನ್ನ ತರಲು ನಾವು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದೇವೆ. ಆದ್ರೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಅಲ್ಲಿನ ಸ್ಥಿತಿ ನಿನ್ನೆಗಿಂತಲೂ ಇಂದು ಭೀಕರವಾಗಿದೆ. ಈಗ ಪಾರ್ಥಿವ ಶರೀರವನ್ನ ಸ್ಥಳೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲಿ ಬಹಳ ಕೆಟ್ಟ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಮಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ರಾಯಭಾರಿ ಅಧಿಕಾರಿ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.