ಗಾಂಧಿನಗರ (ಗುಜರಾತ್): ಕೇಂದ್ರ ಸರ್ಕಾರವು ಹತ್ತು ಲಕ್ಷ ಉದ್ಯೋಗಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತಿದೆ. ಮುಂದಿನ ತಿಂಗಳಲ್ಲಿ ಉದ್ಯೋಗ ಮೇಳಗಳನ್ನು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಆಯೋಜಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ ಸರ್ಕಾರದ ವತಿಯಿಂದ ಶನಿವಾರ ಗಾಂಧಿನಗರದಲ್ಲಿ ಆಯೋಜಿಸಿದ್ದ ರೋಜ್‌ಗಾರ್ ಮೇಳ (ಉದ್ಯೋಗ ಮೇಳ)ದಲ್ಲಿ ವಿಡಿಯೋ ಮೂಲಕ ಸಂದೇಶ ನೀಡಿದ ಪ್ರಧಾನಿ ಮೋದಿ, ಯುವಕರಿಗೆ ಸರ್ಕಾರಿ ಉದ್ಯೋಗಗಳ ಸಂಖ್ಯೆಯು ಇನ್ನೂ ಹೆಚ್ಚಾಗಲಿದೆ ಎಂದರು.
ಕೇಂದ್ರ ಸರ್ಕಾರವು ಹತ್ತು ಲಕ್ಷ ಉದ್ಯೋಗಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಧನ್ತೇರಸ್‌ನ ಶುಭ ದಿನದಂದು ನಾವು ರಾಷ್ಟ್ರೀಯ ಮಟ್ಟದಲ್ಲಿ ರೋಜ್‌ಗಾರ್ ಮೇಳವನ್ನು ನಡೆಸಿದ್ದೇವೆ. ಅಲ್ಲಿ 75,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದ್ದೇವೆ. ಮುಂದಿನ ತಿಂಗಳಲ್ಲಿ ಇಂತಹ ಮೇಳಗಳನ್ನು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಗುಜರಾತ್‌ನ ಹೊಸ ಕೈಗಾರಿಕಾ ನೀತಿಯನ್ನು ಹೊಗಳಿಸಿದ ಪ್ರಧಾನಿ, 3 ಮತ್ತು 4ನೇ ದರ್ಜೆಯ ಸರ್ಕಾರಿ ಹುದ್ದೆಗಳಿಗೆ ಸಂದರ್ಶನ ಪ್ರಕ್ರಿಯೆಯನ್ನು ರದ್ದುಗೊಳಿಸುವಂತಹ ಸುಧಾರಣೆ ಕ್ರಮಗಳನ್ನು ಶ್ಲಾಘಿಸಿದರು. ಜೊತೆಗೆ 2022 ರಲ್ಲಿ ಗುಜರಾತ್ ಸರ್ಕಾರವು ಒಂದು ವರ್ಷದಲ್ಲಿ 35,000 ಸರ್ಕಾರಿ ಉದ್ಯೋಗಗಳನ್ನು ನೀಡುವ ಗುರಿಯನ್ನು ಬಹುತೇಕ ತಲುಪಿದೆ ಎಂದು ಹೇಳಿದರು.
ಜೊತೆಗೆ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಮುಂದಿನ 25 ವರ್ಷಗಳು ದೇಶಕ್ಕೆ ಬಹಳ ನಿರ್ಣಾಯಕವಾಗಿದೆ. ಸಾಕಷ್ಟು ಅಭಿವೃದ್ಧಿ ಹೊಂದಬೇಕಾಗಿದ್ದು, ಸಮಾಜ ಮತ್ತು ದೇಶಕ್ಕಾಗಿ ಯುವಕರು ತಮ್ಮ ಕರ್ತವ್ಯವನ್ನು ಪೂರೈಸಬೇಕೆಂದು ಪ್ರಧಾನಿ ಸಲಹೆ ನೀಡಿದರು.
ಬಿಜೆಪಿ ಆಡಳಿತವಿರುವ ಗುಜರಾತ್ ರಾಜ್ಯದಲ್ಲಿ ಕೆಲ ದಿನಗಳಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದೆ. ಶನಿವಾರ ನಡೆದ ಉದ್ಯೋಗ ಮೇಳದಲ್ಲಿ 5 ಸಾವಿರ ಜನರಿಗೆ ಗುಜರಾತ್ ಪಂಚಾಯತ್ ಸೇವಾ ಮಂಡಳಿಯ ನೇಮಕಾತಿ ಪತ್ರಗಳು ಹಾಗೂ 8 ಸಾವಿರ ಮಂದಿಗೆ ಜನ ಗುಜರಾತ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಮಂಡಳಿ ಮತ್ತು ಲೋಕರಕ್ಷಕ ನೇಮಕಾತಿ ಮಂಡಳಿಯಿಂದ ನೇಮಕಾತಿ ಪತ್ರಗಳನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ವಿತರಿಸಿದರು.
ಇದನ್ನೂ ಓದಿ:ಪ್ರವಾಸಿ ವೀಸಾ.. ನಿರ್ದಿಷ್ಟ ಧರ್ಮದ ಬೋಧನೆ: 7 ಜರ್ಮನ್ ಪ್ರಜೆಗಳಿಗೆ 500 ಯುಎಸ್ ಡಾಲರ್ ದಂಡ