ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಜುಲೈ 19ರಿಂದ ಆರಂಭಗೊಳ್ಳಲಿರುವ ಸಂಸತ್ ಮುಂಗಾರು ಅಧಿವೇಶನ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ದಟ್ಟವಾಗಿದೆ.
ಬರೋಬ್ಬರಿ ಒಂದು ವರ್ಷದ ಬಳಿಕ ಕೇಂದ್ರ ಸಚಿವರು ಮುಖಾಮುಖಿಯಾಗಿ(ದೈಹಿಕವಾಗಿ) ಇಂದಿನ ಸಚಿವ ಸಂಪುಟದಲ್ಲಿ ಭಾಗಿಯಾಗುತ್ತಿದ್ದಾರೆ. ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದ ಕಾರಣ ಈ ಹಿಂದೆ ಸಚಿವ ಸಂಪುಟ ಸಭೆ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದಿದ್ದವು. 43 ಮಂದಿ ನೂತನವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ನಡೆಯುತ್ತಿರುವ ಎರಡನೇ ಕ್ಯಾಬಿನೆಟ್ ಸಭೆ ಇದ್ದಾಗಿದ್ದು, ಅನೇಕ ವಿಷಯಗಳ ಬಗ್ಗೆ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಬೆಳಗ್ಗೆ 11 ಗಂಟೆಗೆ ಸಭೆ ಆಯೋಜನೆಗೊಂಡಿದೆ.
ಇದನ್ನೂ ಓದಿರಿ: ಇಂಗ್ಲೆಂಡ್ ದಾಳಿಗೆ ಬೆದರಿದ ಪಾಕ್... ಏಕದಿನ ಸರಣಿಯಲ್ಲಿ 3-0 ಅಂತರದಿಂದ ಸೋಲು
ಪ್ರಮುಖವಾಗಿ ಜುಲೈ 19ರಿಂದ ಸಂಸತ್ ಮುಂಗಾರು ಅಧಿವೇಶನ ಆರಂಭಗೊಳ್ಳುತ್ತಿದ್ದು, ಯಾವೆಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕು ಎಂಬುದರ ಕುರಿತು ಇಂದಿನ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ. ಪ್ರಮುಖವಾಗಿ ವಿರೋಧ ಪಕ್ಷಗಳು, ತೈಲ ಬೆಲೆ ಏರಿಕೆ, ಕೃಷಿ ಕಾಯ್ದೆಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ಗುರಿಯಾಗಿಸಿಕೊಂಡು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಲು ಸಾಧ್ಯತೆ ದಟ್ಟವಾಗಿದ್ದು, ಯಾವ ರೀತಿಯಾಗಿ ಚರ್ಚೆ ಎದುರಿಸಬೇಕು ಎಂಬುದರ ಕುರಿತು ಚರ್ಚೆಯಾಗಲಿದೆ.
ಉಳಿದಂತೆ ದೇಶದಲ್ಲಿ ಕೊರೊನಾ ವೈರಸ್ ಹಾವಳಿ, ಕೋವಿಡ್ ವ್ಯಾಕ್ಸಿನೇಷನ್ ಸೇರಿದಂತೆ ಇತರೆ ವಿಷಯಗಳು ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.