ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ದಿನಗಳ ಹಿಂದಷ್ಟೇ ಬಡವರಿಗೆ ಆಹಾರ ಧಾನ್ಯ ವಿತರಿಸುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಯನ್ನು ಇನ್ನೂ ಐದು ವರ್ಷ ವಿಸ್ತರಿಸಲಾಗುವುದು ಎಂದು ಘೋಷಿಸಿದ್ದರು. ಅದಕ್ಕೀಗ ಕೇಂದ್ರ ಸಚಿವ ಸಂಪುಟ ಮುದ್ರೆ ಒತ್ತಿದೆ.
ಇಂದು (ಬುಧವಾರ) ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಆರಂಭಿಸಲಾಗಿದ್ದ ಮಹತ್ವಾಕಾಂಕ್ಷಿ ಯೋಜನೆಯನ್ನು ವಿಸ್ತರಿಸುತ್ತ ಬರಲಾಗುತ್ತಿದೆ. ಇದು ಕೋಟ್ಯಂತರ ಜನರಿಗೆ ಆಹಾರ ಧಾನ್ಯ ಸರಬರಾಜು ಮಾಡುತ್ತಿದೆ.
ಪಿಎಂ ಗರೀಬ್ ಕಲ್ಯಾಣ್ ಆಗಿದ್ದ ಯೋಜನೆಯನ್ನು 2020ರಲ್ಲಿ ಕೊರೊನಾ ವಕ್ಕರಿಸಿಕೊಂಡ ಬಳಿಕ ಜನರು ಆಹಾರ ಸಮಸ್ಯೆಗೆ ಸಿಲುಕದಿರಲಿ ಎಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಾಗಿ ಮಾರ್ಪಡಿಸಿ ಕನಿಷ್ಠ ದರದಲ್ಲಿ ನೀಡಲಾಗುತ್ತಿದ್ದ ಧಾನ್ಯಗಳನ್ನು (ಗೋಧಿ, ಅಕ್ಕಿ,) ಉಚಿತವಾಗಿ ನೀಡಲಾಯಿತು. ಪಡಿತರ ಚೀಟಿ ಹೊಂದಿರುವ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಧಾನ್ಯಗಳ ಜೊತೆಗೆ ಹೆಚ್ಚುವರಿಯಾಗಿ 5 ಕೆಜಿ ನೀಡಲಾಗುತ್ತಿದೆ.
ಸತತ 7 ಬಾರಿ ವಿಸ್ತರಣೆ:ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ವಿಸ್ತರಿಸುವ ಕೇಂದ್ರದ ಉದ್ದೇಶವನ್ನು ಪ್ರಧಾನಿ ಮೋದಿ ಅವರು ನವೆಂಬರ್ 4 ರಂದು ಛತ್ತೀಸ್‌ಗಢದ ದುರ್ಗ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಘೋಷಿಸಿದ್ದರು. 2020 ರಲ್ಲಿ ದೇಶದಲ್ಲಿ COVID - 19 ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಬಡವರು ಮತ್ತು ನಿರ್ಗತಿಕರು ಎದುರಿಸುತ್ತಿರುವ ಕಷ್ಟಗಳಿಗೆ ನೆರವಿನ ರೂಪದಲ್ಲಿ ಈ ಯೋಜನೆ ಜಾರಿಗೆ ಬಂದಿತು.