ನವದೆಹಲಿ: ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ 32,500 ಕೋಟಿ ರೂಪಾಯಿ ಅಂದಾಜು ವೆಚ್ಚದ ಏಳು ಯೋಜನೆಗಳಿಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಇಂದು (ಬುಧವಾರ) ಅನುಮೋದನೆ ನೀಡಿದೆ. ಅತ್ಯಂತ ಜನನಿಬಿಡ ರೈಲ್ವೆ ವಿಭಾಗಗಳಲ್ಲಿ ಹೆಚ್ಚು ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಸುಗಮ ಸಂಚಾರ ಹಾಗೂ ದಟ್ಟಣೆ ಕಡಿಮೆ ಮಾಡಲು ಇದು ಅನುಕೂಲವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಶ್ವಿನಿ ವೈಷ್ಣವ್, ''ರೈಲ್ವೆ ಸಚಿವಾಲಯದ ಏಳು ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದಲೇ ಸಂಪೂರ್ಣ ಶೇ.100ರಷ್ಟು ಅನುದಾನ ಒದಗಿಸಲಾಗುತ್ತದೆ. ಈ ಯೋಜನೆಗಳು ಉತ್ತರ ಪ್ರದೇಶ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಸೇರಿ 9 ರಾಜ್ಯಗಳ 35 ಜಿಲ್ಲೆಗಳನ್ನು ಒಳಗೊಂಡಿವೆ'' ಎಂದು ಹೇಳಿದರು.
''ಗೋರಖ್‌ಪುರ ಕಂಟೋನ್ಮೆಂಟ್-ವಾಲ್ಮೀಕಿ ನಗರ (ಡಬ್ಲಿಂಗ್), ಸೋನ್ ನಗರ-ಆಂದಾಲ್ ಬಹು ಟ್ರ್ಯಾಕಿಂಗ್ ಯೋಜನೆ, ನೆರಗುಂಡಿ-ಬರಾಂಗ್, ಖುರ್ದಾ ರೋಡ್-ವಿಜಯನಗರಂ (ಮೂರನೇ ಲೈನ್), ಮುದ್ಖೇಡ್-ಮೇಡ್ಚಲ್ ಮತ್ತು ಮಹೆಬೂಬಗರ-ಧೋನೆ, ಗುಂಟೂರು-ಬೀಬಿನಗರ ಮತ್ತು ಚೋಪನ್-ಚುನಾರ್ (ಎಲ್ಲ ಮಾರ್ಗಗಳ ಡಬ್ಲಿಂಗ್) ಹಾಗೂ ಸಮಾಖಿಯಾಲಿ-ಗಾಂಧಿಧಾಮ್ (ನಾಲ್ಕನೇ ಲೈನ್) ಯೋಜನೆಗಳು ಇವಾಗಿದೆ'' ಎಂದು ವಿವರಿಸಿದರು.