ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಟೆಲಿಕಾಂ ಹಾಗೂ ಅಟೋ ವಲಯಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ದೂರಸಂಪರ್ಕ ವಲಯದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಪ್ರಾಮುಖ್ಯತೆ ಕೊಟ್ಟಿದೆ.
ಟೆಲಿಕಾಂ ಕಂಪನಿಗಳಿಗೆ ಬಾಕಿ ಮೊತ್ತ ಪಾವತಿಗೆ ನಾಲ್ಕು ವರ್ಷಗಳ ಗಡುವು ಹಾಗೂ ಶೇ. 100ರಷ್ಟು ವಿದೇಶಿ ಬಂಡವಾಳ ಹೂಡಿಕೆ(ಎಫ್ಡಿಎ) ಮಾಡಲು ಅವಕಾಶ ನೀಡಲಾಗಿದೆ.
ಈ ಕುರಿತು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಪ್ರಮುಖವಾಗಿ ಆಟೋಮ್ಯಾಟಿಕ್ ರೂಟ್ ಮೂಲಕ ಶೇ. 100ರಷ್ಟು ಎಫ್ಡಿಐಗೆ ಅವಕಾಶ ಕಲ್ಪಿಸಲಾಗಿದ್ದು, ಕಂಪನಿಗಳು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಇದು ಅನುಕೂಲವಾಗಲಿದೆ. ಆದರೆ ಮೊರಟೋರಿಯಂನ 4 ವರ್ಷದ ಅವಧಿಯ ಬಡ್ಡಿಯನ್ನು ಪಾವತಿಸುವಂತೆ ತಿಳಿಸಲಾಗಿದೆ.
ಎಜಿಆರ್, ತರಂಗಾಂತರ ಬಳಕೆ ಶುಲ್ಕ ವಾರ್ಷಿಕವಾಗಿ ಬದಲಾವಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದ್ದು, ದೂರಸಂಪರ್ಕ ಆಪರೇಟರ್ಗಳು ತಮಗೆ ಲಾಭಕರ ಎನಿಸುವ ತರಂಗಾಂತರ ಹಂಚಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಪ್ರಮುಖವಾಗಿ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ವೊಡಾಫೋನ್, ಏರ್ಟೆಲ್ ನಿಟ್ಟಿಸಿರುಬಿಟ್ಟಿವೆ. ಜೊತೆಗೆ ಷೇರು ಮಾರುಕಟ್ಟೆಯಲ್ಲಿ ಇವುಗಳ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ.