ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ 77ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ 'ಪಿಎಂ ವಿಶ್ವಕರ್ಮ ಯೋಜನೆ'ಗೆ ಕೇಂದ್ರ ಸಚಿವ ಸಂಪುಟ ಇಂದು (ಬುಧವಾರ) ಅನುಮೋದನೆ ನೀಡಿದೆ. 13 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಜಾರಿಯಾಗಲಿದ್ದು, ಕೌಶಲ್ಯಾಧರಿತ ಕುಶಲಕರ್ಮಿಗಳಿಗೆ 1 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಸಿಗಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, "ದೇಶದ ಗ್ರಾಮೀಣ ಮತ್ತು ನಗರ ಪ್ರದೇಶದ ಸಾಂಪ್ರದಾಯಿಕ ಕುಶಲಕರ್ಮಿಗಳ ಸಲುವಾಗಿ 13,000 ಕೋಟಿ ರೂಪಾಯಿ ಗಾತ್ರದ ಪಿಎಂ ವಿಶ್ವಕರ್ಮ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಯನ್ನು ಘೋಷಿಸಿದ್ದರು" ಎಂದರು.
"ನೇಕಾರರು, ಅಕ್ಕಸಾಲಿಗರು, ಅಗಸರು, ಕ್ಷೌರಿಕರು ಸೇರಿದಂತೆ ವಿವಿಧ ವೃತ್ತಿಗಳನ್ನು ನಡೆಸುವ ಕುಟುಂಬಗಳು ವಿಶ್ವಕರ್ಮ ಯೋಜನೆ ಮೂಲಕ ಸಬಲೀಕರಣ ಸಾಧಿಸಲು ಈ ಯೋಜನೆಯಡಿ 1 ಲಕ್ಷ ರೂ.ದವರೆಗಿನ ಸಾಲ ನೀಡಲಾಗುವುದು. ಈ ಯೋಜನೆಯು ಸಾಂಪ್ರದಾಯಿಕ ಕೌಶಲಗಳನ್ನು ಹೊಂದಿರುವ ಜನರ ಪ್ರಗತಿಯ ಉದ್ದೇಶ ಹೊಂದಿದೆ" ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.