ಹೈದರಾಬಾದ್:ಜಗತ್ತಿನ ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತದ ಭೀತಿ ಎದುರಾಗಿರುವ ಈ ಸಂದರ್ಭದಲ್ಲಿ ಮೋದಿ ಸರಕಾರ ದೇಶದ ಆರ್ಥಿಕ ಬೆಳವಣಿಗೆಯ ಉದ್ದೇಶದಿಂದ ಕೇಂದ್ರ ಬಜೆಟ್ 2023 ಅನ್ನು ಮಂಡಿಸಲಿದೆ. ಕೊರೊನಾ ನಂತರ ಕುಸಿದಿರುವ ದೇಶದ ಆರ್ಥಿಕತೆಗೆ ಹೆಚ್ಚಿನ ವೇಗ ನೀಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಸಾರ್ವತ್ರಿಕ ಚುನಾವಣೆಗೂ ಮುನ್ನ ಕೇಂದ್ರದ ಮೋದಿ ಸರಕಾರದ ಕೊನೆಯ ಸಂಪೂರ್ಣ ಬಜೆಟ್ ಇದಾಗಿರುವುದರಿಂದ ಈ ಬಗ್ಗೆ ಹೆಚ್ಚಿನ ಕುತೂಹಲ ಮೂಡಿದೆ.
ವೇತನದಾರರು ತೆರಿಗೆ ವಿನಾಯಿತಿಗಾಗಿ ಆಶಿಸುತ್ತಿರುವಾಗ, ಕೈಗಾರಿಕಾ ಗುಂಪುಗಳು ಸರ್ಕಾರದಿಂದ ಅನೇಕ ಪ್ರಯೋಜನಗಳನ್ನು ನಿರೀಕ್ಷಿಸುತ್ತವೆ. ಮತ್ತೊಂದೆಡೆ, ದೇಶದಲ್ಲಿ ಏರುತ್ತಿರುವ ಬೆಲೆ, ಉದ್ಯೋಗ ಸೃಷ್ಟಿ, ಕುಸಿಯುತ್ತಿರುವ ಆರ್ಥಿಕತೆ ನಿಯಂತ್ರಣ ಕೇಂದ್ರ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸುತ್ತದೆ. ಮಧ್ಯಮ ವರ್ಗದವರಿಗೆ ಪರಿಹಾರ ನೀಡಲು ಆದಾಯ ತೆರಿಗೆ ನಿಯಮಗಳನ್ನು ಬದಲಾಯಿಸಬಹುದಾಗಿದೆ. ಗ್ರಾಮೀಣ ಉದ್ಯೋಗ ಯೋಜನೆಯಂತಹ ಕಾರ್ಯಕ್ರಮಗಳ ಮೂಲಕ ಬಡವರ ಮೇಲೆ ಖರ್ಚು ಹೆಚ್ಚಿಸಬಹುದಾಗಿದ್ದು, ಸ್ಥಳೀಯರಿಗೆ ಆರ್ಥಿಕ ಪ್ರೋತ್ಸಾಹವನ್ನು ನೀಡಲು ಕ್ರಮ ಕೈಗೊಳ್ಳಬಹುದೆಂಬ ನಿರೀಕ್ಷೆಗಳು ತುಂಬಿವೆ.
ಬಜೆಟ್ ಜನರ ಮುಖದಲ್ಲಿ ಮಂದಹಾಸವನ್ನು ತರುತ್ತದೆಯೇ ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ಫೆಬ್ರವರಿ 2023 ರ ಮೊದಲ ಕೆಲವು ದಿನಗಳಲ್ಲಿ ಉತ್ತರ ಸಿಗಲಿದೆ. ಸದ್ಯಕ್ಕೆ ಇಲ್ಲಿ ಬಜೆಟ್‌ನ ಕೆಲವು ಇತಿಹಾಸ ಮತ್ತು ಕೆಲವು ಮೈಲಿಗಲ್ಲುಗಳನ್ನು ಅರ್ಥಮಾಡಿಕೊಳ್ಳಲು ಈ ಕೆಳಗೆ ವಿವರಿಸಲಾಗಿದೆ.
ಭಾರತದ ಮೊದಲ ಬಜೆಟ್: ಈಸ್ಟ್ ಇಂಡಿಯಾ ಕಂಪನಿಯ ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿ ಜೇಮ್ಸ್ ವಿಲ್ಸನ್ ಅದನ್ನು ಬ್ರಿಟಿಷ್ ಕ್ರೌನ್‌ಗೆ ಪ್ರಸ್ತುತಪಡಿಸಿದಾಗ ಏಪ್ರಿಲ್ 7, 1860 ರಂದು ಭಾರತದಲ್ಲಿ ಬಜೆಟ್ ಅನ್ನು ಮೊದಲು ಪರಿಚಯಿಸಲಾಯಿತು. ಸ್ವತಂತ್ರ ಭಾರತದ ಮೊದಲ ಬಜೆಟ್ ಅನ್ನು ನವೆಂಬರ್ 26, 1947 ರಂದು ಆಗಿನ ಹಣಕಾಸು ಸಚಿವ ಆರ್.ಕೆ.ಷಣ್ಮುಖಂ ಚೆಟ್ಟಿ ಮಂಡಿಸಿದರು. ಬಜೆಟ್ ಒಟ್ಟು ಆದಾಯವನ್ನು ರೂ.171.15 ಕೋಟಿ ಮತ್ತು ವಿತ್ತೀಯ ಕೊರತೆ ರೂ.24.59 ಕೋಟಿ ಎಂದು ಅಂದಾಜಿಸಲಾಗಿತ್ತು. ಚೆಟ್ಟಿ ಅವರು ವಕೀಲರು, ಅರ್ಥಶಾಸ್ತ್ರಜ್ಞ, ಕೈಗಾರಿಕೋದ್ಯಮಿ ಮತ್ತು ರಾಜಕಾರಣಿ, ಹಣಕಾಸು ಮಂತ್ರಿಯ ಪಾತ್ರವನ್ನು ವಹಿಸುವ ಮೊದಲು 1933 ರಿಂದ 1935 ರವರೆಗೆ ಭಾರತದ ಕೇಂದ್ರ ಶಾಸನ ಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ದೀರ್ಘ ಮತ್ತು ಕಡಿಮೆ ಬಜೆಟ್ ಭಾಷಣ: ಫೆಬ್ರವರಿ 1, 2020 ರಂದು ಕೇಂದ್ರ ಬಜೆಟ್ 2020-21 ಅನ್ನು ಮಂಡಿಸುವಾಗ 2 ಗಂಟೆ 42 ನಿಮಿಷಗಳ ಕಾಲ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು ಸುದೀರ್ಘ ಭಾಷಣ ಮಾಡಿದ್ದರು. ಇನ್ನೂ ಎರಡು ಪುಟಗಳು ಉಳಿದಿರುವಾಗಲೇ ಸೀತಾರಾಮನ್ ಅವರು ಅಸ್ವಸ್ಥರಾಗಿದ್ದರಿಂದ ತಮ್ಮ ಮಾತಗಳನ್ನು ಮೊಟಕುಗೊಳಿಸಿದರು. ಭಾಷಣದ ಉಳಿದ ಭಾಗವನ್ನು ಓದಿದಂತೆ ಪರಿಗಣಿಸುವಂತೆ ಅವರು ಸ್ಪೀಕರ್‌ಗೆ ಮನವಿ ಮಾಡಿಕೊಂಡರು.
ಈ ಭಾಷಣದ ಸಮಯದಲ್ಲಿ, ಅವರು 2 ಗಂಟೆ 17 ನಿಮಿಷಗಳ ಕಾಲ ಮಾತನಾಡಿದಾಗ ಅವರು ಜುಲೈ 2019 ರ ತಮ್ಮ ಸ್ವಂತ ದಾಖಲೆಯನ್ನು ಮುರಿದ್ದರು. 2021 ರಲ್ಲಿ, ಅವರು ಮೊದಲ ಬಾರಿಗೆ ಬಜೆಟ್ ಅನ್ನು ಕಾಗದರಹಿತವಾಗಿ ಮಾಡಿದ ನಂತರ ಟ್ಯಾಬ್ಲೆಟ್‌ನಿಂದ ಓದುತ್ತಾ ತಮ್ಮ ಕಡಿಮೆ ಬಜೆಟ್ ಭಾಷಣವನ್ನು ಮಾಡಿದರು. 1 ಗಂಟೆ 40 ನಿಮಿಷಗಳ ಕಾಲ ನಡೆದ ಭಾಷಣದಲ್ಲಿ ಹಣಕಾಸು ಸಚಿವರು 10,500 ಪದಗಳನ್ನು ಓದಿದ್ದರು. 2022 ರಲ್ಲಿ, ಅವರು 1 ಗಂಟೆ 20 ನಿಮಿಷಗಳ ಕಾಲ ಭಾಷಣ ಮಾಡಿದ್ದರು. 1977 ರಲ್ಲಿ ಆಗಿನ ಹಣಕಾಸು ಸಚಿವ ಹಿರೂಭಾಯಿ ಮುಲ್ಜಿಭಾಯಿ ಪಟೇಲ್ ಅವರು ಮಾಡಿದ ಅತ್ಯಂತ ಕಡಿಮೆ ಬಜೆಟ್ ಭಾಷಣಕ್ಕೆ 800 ಪದಗಳು ಆಗಿದ್ದವು.
ಬಜೆಟ್ ಭಾಷಣದಲ್ಲಿ ಹೆಚ್ಚಿನ ಪದಗಳು:18,650 ಪದಗಳಿರುವ ಮನಮೋಹನ್ ಸಿಂಗ್ ಅವರು 1991 ರಲ್ಲಿ ನರಸಿಂಹರಾವ್ ಸರ್ಕಾರದ ಅಡಿಯಲ್ಲಿ ಪದಗಳ ವಿಷಯದಲ್ಲಿ ಸುದೀರ್ಘವಾದ ಬಜೆಟ್ ಭಾಷಣವನ್ನು ಮಾಡಿದರು. 2018 ರಲ್ಲಿ, ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ 18,604 ಪದಗಳ ಭಾಷಣವು ಪದಗಳ ಎಣಿಕೆಗೆ ಸಂಬಂಧಿಸಿದಂತೆ ಎರಡನೇ ಅತಿ ಸುದೀರ್ಘವಾದ ಬಜೆಟ್ ಭಾಷಣವಾಗಿದೆ. ಆಗ ಜೇಟ್ಲಿ 1 ಗಂಟೆ 49 ನಿಮಿಷಗಳ ಕಾಲ ಮಾತನಾಡಿದ್ದರು.
ಅತಿ ಹೆಚ್ಚು ಬಜೆಟ್ ಮಂಡನೆ: ಮಾಜಿ ಪ್ರಧಾನಿ ಮೊರಾರಾಜಿ ದೇಸಾಯಿ ಅವರು ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. 1962-69ರ ಅವಧಿಯಲ್ಲಿ ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ 10 ಬಜೆಟ್‌ಗಳನ್ನು ಮಂಡಿಸಿದ್ದರು. ನಂತರ ಪಿ ಚಿದಂಬರಂ (9), ಪ್ರಣಬ್ ಮುಖರ್ಜಿ (8), ಯಶವಂತ್ ಸಿನ್ಹಾ (8) ಮತ್ತು ಮನಮೋಹನ್ ಸಿಂಗ್ (6) ಅವರು ಮಂಡಿಸಿದ್ದರು.
ಸಮಯ: 1999 ರವರೆಗೆ ಬ್ರಿಟಿಷರ ಕಾಲದ ಪದ್ಧತಿಯಂತೆ ಫೆಬ್ರವರಿಯ ಕೊನೆಯ ಕೆಲಸದ ದಿನದಂದು ಸಂಜೆ 5 ಗಂಟೆಗೆ ಕೇಂದ್ರ ಬಜೆಟ್ ಅನ್ನು ಮಂಡಿಸಲಾಯಿತು. ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು 1999 ರಲ್ಲಿ ಬಜೆಟ್ ಮಂಡನೆ ಸಮಯವನ್ನು 11 ಗಂಟೆಗೆ ಬದಲಾಯಿಸಿದರು. ಅರುಣ್ ಜೇಟ್ಲಿ 2017 ರ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಲು ಪ್ರಾರಂಭಿಸಿದರು. ಆ ತಿಂಗಳ ಕೊನೆಯ ಕೆಲಸದ ದಿನವನ್ನು ಬಳಸುವ ವಸಾಹತುಶಾಹಿ ಯುಗದ ಸಂಪ್ರದಾಯವನ್ನು ಹೊರಗಿಟ್ಟರು. ಈಗ ಹೊಸ ಸಂಪ್ರದಾಯವನ್ನು ಅನುಸರಿಸಲಾಗುತ್ತಿದ್ದು, ಫೆಬ್ರವರಿ 1 ರಂದು ಅಂದ್ರೆ ಇಂದು ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2023 ಮಂಡನೆ ಭಾಷಣವನ್ನು ಮಾಡಲಾಗುತ್ತದೆ. ಸೀತಾರಾಮನ್ ಅವರು ಎರಡು ಗಂಟೆಗಳ ಕಾಲ ರಾಷ್ಟ್ರದ ವಾರ್ಷಿಕ ಲೆಕ್ಕಪತ್ರ ಪ್ರತಿಗಳನ್ನು ಮಂಡಿಸುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.
ಭಾಷೆ: 1955 ರವರೆಗೆ ಕೇಂದ್ರ ಬಜೆಟ್ ಅನ್ನು ಇಂಗ್ಲಿಷ್ನಲ್ಲಿ ಮಂಡಿಸಲಾಯಿತು. ಕಾಂಗ್ರೆಸ್ ನೇತೃತ್ವದ ಸರ್ಕಾರವು ನಂತರ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಬಜೆಟ್ ಪತ್ರಿಕೆಗಳನ್ನು ಮುದ್ರಿಸಲು ನಿರ್ಧರಿಸಿತು.
ಮೊದಲ ಮಹಿಳೆ: 1970-71 ರ ಆರ್ಥಿಕ ವರ್ಷಕ್ಕೆ ಬಜೆಟ್ ಮಂಡಿಸಿದ ಇಂದಿರಾ ಗಾಂಧಿ ನಂತರ 2019 ರಲ್ಲಿ ಸೀತಾರಾಮನ್ ಬಜೆಟ್ ಮಂಡಿಸಿದ ಎರಡನೇ ಮಹಿಳೆಯಾಗಿದ್ದಾರೆ. ಆ ವರ್ಷ, ಸೀತಾರಾಮನ್ ಅವರು ಸಾಂಪ್ರದಾಯಿಕ ಬಜೆಟ್ ಬ್ರೀಫ್‌ಕೇಸ್ ಅನ್ನು ತ್ಯಜಿಸಿದರು ಮತ್ತು ಬದಲಿಗೆ ಭಾಷಣ ಮತ್ತು ಇತರ ದಾಖಲೆಗಳನ್ನು ಸಾಗಿಸಲು ರಾಷ್ಟ್ರೀಯ ಲಾಂಛನದೊಂದಿಗೆ ಸಾಂಪ್ರದಾಯಿಕ 'ಬಹಿ-ಖಾತಾ'ವನ್ನು ಪಡೆದರು.