ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಕೊನೆಯ ಹಾಗೂ 2023ನೇ ಸಾಲಿನ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಇಂದು ಮಂಡಿಸುತ್ತಿದ್ದಾರೆ. ನಿರ್ಮಲಾ ಸೀತರಾಮನ್ ಅವರು ಮಂಡಿಸುತ್ತಿರುವ 6ನೇ ಬಜೆಟ್ ಇದಾಗಿದೆ. ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ವಿಶೇಷ ಯೋಜನೆಗಳನ್ನು ನೀಡಿರುವ ನಿರ್ಮಲಾ ಸೀತರಾಮನ್ ಬಜೆಟ್ ಭಾಷಣದಲ್ಲಿ, ಉದ್ಯಮಿಗಳಿಂದ ಕೃಷಿ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
ಕೃಷಿಕರಿಗೆ ನೀಡುವ ಸಾಲದ ಯೋಜನೆಯ ಕ್ರೆಡಿಟ್ ಗುರಿಯನ್ನು 20 ಲಕ್ಷ ಕೋಟಿವರೆಗೆ ವಿಸ್ತರಿಸಲಾಗುವುದು ಎಂದಿರುವ ಅವರು ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು ಎಂದು ಸೀತಾರಾಮನ್ ಸಂಸತ್ತಿನಲ್ಲಿ ಹೇಳಿದರು.
ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು(digital public infrastructure) ಮುಕ್ತವಾದ ಮೂಲ, ಮುಕ್ತ ಗುಣಮಟ್ಟ ಮತ್ತು ಪರಸ್ಪರ ಕಾರ್ಯಸಾಧ್ಯವಾದ ಸಾರ್ವಜನಿಕ ವೇದಿಕೆಯಾಗಿ ನಿರ್ಮಿಸಲಾಗುವುದು. ಇದು ಬೆಳೆ ಯೋಜನೆ ಮಾಡುವ ಸಂದರ್ಭ ರೈತ ಕೇಂದ್ರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಕೃಷಿ ಕ್ಷೇತ್ರ ಉತ್ತಮವಾಗಿ ಕಾರ್ಯನಿರ್ವಹಿಸಿದೆ, ಆದರೆ ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳು, ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚ ಮುಂತಾದ ಸವಾಲುಗಳನ್ನು ಜಯಿಸಲು ಕ್ಷೇತ್ರಕ್ಕೆ 'ಮರು ದೃಷ್ಟಿಕೋನ' ಅಗತ್ಯವಿದೆ ಎಂದು ಹಣಕಾಸು ಸಚಿವರು ಹೇಳಿದರು.
ಕೃಷಿಕರ ಆದಾಯ ಹೆಚ್ಚಿಸುವಂತಹ ಯೋಜನೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಪಿಎಂ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಉಪಯೋಜನೆ ಘೋಷಣೆಗಳನ್ನು ಘೋಷಣೆ ಮಾಡಲಾಗುವುದು. ಇದಕ್ಕಾಗಿ 6,000 ಕೋಟಿ ರೂ. ಮೀಸಲಿಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದರು.