ಕರ್ನಾಟಕ

karnataka

ETV Bharat / bharat

ಕೇಂದ್ರ ಬಜೆಟ್​ 2023: ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯಾದ 9.4 ಲಕ್ಷ ಕೋಟಿ ಬಡ್ಡಿ ಪಾವತಿ - ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿ

ಭಾರತದ ಒಟ್ಟು ಬಜೆಟ್​ನ ನಾಲ್ಕನೇ ಒಂದು ಭಾಗವನ್ನು ಕೇವಲ ಬಡ್ಡಿ ಪಾವತಿಗಾಗಿಯೇ ವಿನಿಯೋಗಿಸಲಾಗುತ್ತಿದೆ. ಸುಮಾರು 39.45 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾದ ಒಟ್ಟು ಬಜೆಟ್​ನಲ್ಲಿ ಇದು ಸುಮಾರು ನಾಲ್ಕನೇ ಒಂದರಷ್ಟಾಗುತ್ತದೆ.

Union Budget: Rs 9.4 lakh crore interest
ಕೇಂದ್ರ ಬಜೆಟ್​ 2023

By

Published : Jan 25, 2023, 12:42 PM IST

Updated : Jan 25, 2023, 1:18 PM IST

ಹೈದರಾಬಾದ್: ಕೇಂದ್ರ ಸರ್ಕಾರವು ಪ್ರತಿವರ್ಷ ಸಾಲದ ಬಡ್ಡಿ ಪಾವತಿಗಾಗಿ ಪ್ರತಿ ವರ್ಷ ದೇಶದ ಒಟ್ಟು ಬಜೆಟ್‌ನ ಸುಮಾರು ನಾಲ್ಕನೇ ಒಂದು ಭಾಗವನ್ನು ಬಳಸುತ್ತದೆ. ಇದರಿಂದಾಗಿ ಸರ್ಕಾರದ ಅಭಿವೃದ್ಧಿ ಕಾರ್ಯಸೂಚಿಯ ಮೇಲೆ ತೀವ್ರ ಒತ್ತಡ ಬೀಳುತ್ತಿದೆ. ಸಾರ್ವಜನಿಕ ಸಾಲ ನಿರ್ವಹಣಾ ವರದಿಯ ಪ್ರಕಾರ, ಮಾರ್ಚ್ 2022 ರ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದ ಒಟ್ಟು ಬಾಕಿ ಹೊಣೆಗಾರಿಕೆಗಳು 133 ಲಕ್ಷ ಕೋಟಿ ರೂಪಾಯಿಗಳಾಗಿದೆ.

ಪರಿಣಾಮವಾಗಿ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಬೆಳೆದಿರುವ ಬಡ್ಡಿ ಪಾವತಿಗಾಗಿಯೇ ಸರ್ಕಾರವು ಪ್ರತಿ ವರ್ಷ ಬಜೆಟ್‌ನಿಂದ ಬೃಹತ್ ಮೊತ್ತವನ್ನು ಪಾವತಿಸಬೇಕಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಅಂದಾಜಿನ ಪ್ರಕಾರ, ಸರ್ಕಾರವು 9.4 ಲಕ್ಷ ಕೋಟಿ ರೂಪಾಯಿಗಳನ್ನು ಬಡ್ಡಿ ಪಾವತಿಗೇ ಬಳಸಬೇಕಿದೆ. ಇದು ಸುಮಾರು 39.45 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾದ ಕೇಂದ್ರ ಬಜೆಟ್‌ನ ಸುಮಾರು ನಾಲ್ಕನೇ ಒಂದು ಭಾಗವಾಗಿದೆ.

ವರ್ಷಕ್ಕೆ ಶೇ 20ರಷ್ಟು ಬಡ್ಡಿ ಪ್ರಮಾಣ ಹೆಚ್ಚಳ:ಉದಾಹರಣೆಗೆ ನೋಡುವುದಾದರೆ, 2020-21 ಹಣಕಾಸು ವರ್ಷಕ್ಕೆ (ಏಪ್ರಿಲ್-ಮಾರ್ಚ್ ಅವಧಿ), ವಾಸ್ತವಿಕ ಬಡ್ಡಿ ಪಾವತಿಯು ಸುಮಾರು 6.8 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಇದು 2021-22 ರ ಆರ್ಥಿಕ ವರ್ಷದ ಪರಿಷ್ಕೃತ ಅಂದಾಜಿನ ಪ್ರಕಾರ 8.14 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಒಂದೇ ವರ್ಷಕ್ಕೆ ಸುಮಾರು ಶೇ 20ರಷ್ಟು ಏರಿಕೆ ಎಂದರ್ಥ.

ಮೊದಲ ಕೋವಿಡ್ ವರ್ಷದ ಮೊದಲ ಆರು ತಿಂಗಳಲ್ಲಿ ದೇಶದ ಆರ್ಥಿಕ ಚಟುವಟಿಕೆಯು ತೀವ್ರವಾಗಿ ಪ್ರಭಾವಿತವಾದ ಕಾರಣದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದ ಬಡ್ಡಿ ಪಾವತಿಯಲ್ಲಿ ಬೃಹತ್ ಹೆಚ್ಚಳವಾಗಲು ಕಾರಣವಾಗಿದೆ. ಇದು ಸರ್ಕಾರದ ಆದಾಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದ್ದು ಮಾತ್ರವಲ್ಲದೇ, ಕೋವಿಡ್ -19 ಹಿನ್ನೆಲೆಯಲ್ಲಿ ಘೋಷಿಸಲಾದ ಕಲ್ಯಾಣ ಯೋಜನೆಗಳ ಕಾರಣದಿಂದ ಮತ್ತೂ ಹೆಚ್ಚಿನ ಒತ್ತಡ ಉಂಟು ಮಾಡಿತ್ತು.

ಆದಾಗ್ಯೂ, ಪರಿಷ್ಕೃತ ಅಂದಾಜಿನ ಪ್ರಕಾರ ಕಳೆದ ಆರ್ಥಿಕ ವರ್ಷಕ್ಕೆ ಸುಮಾರು 8.14 ಲಕ್ಷ ಕೋಟಿ ರೂ.ಗಳಷ್ಟು ಬಡ್ಡಿ ಪಾವತಿ ನಿಗದಿಪಡಿಸಲಾಗಿತ್ತು ಮತ್ತು ಪ್ರಸ್ತುತ ಆರ್ಥಿಕ ವರ್ಷ 9.4 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಹಿಂದಿನ ವರ್ಷದಲ್ಲಿ ಹೆಚ್ಚಳವಾದ ಶೇ 20ರ ಮೇಲೆ ಮೇಲೆ ಶೇ 15 ರಷ್ಟು ಏರಿಕೆಯಾಗಿದೆ.

ಕೋವಿಡ್​ ಬಳಿಕ ಆರ್ಥಿಕತೆ ಪುನರುಜ್ಜೀವನಕ್ಕೆ ಕ್ರಮ:ಕೋವಿಡ್ -19 ಸಾಂಕ್ರಾಮಿಕದಿಂದ ತೀವ್ರವಾಗಿ ಹಾನಿಗೊಳಗಾದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಬೃಹತ್ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ ಮತ್ತು ಬಂಡವಾಳ ಖಾತೆಯ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿದೆ. ರಸ್ತೆಗಳು ಮತ್ತು ಹೆದ್ದಾರಿಗಳು, ವಿಮಾನ ನಿಲ್ದಾಣಗಳು ಮತ್ತು ಬಂದರುಗಳು, ಆಸ್ಪತ್ರೆಗಳು, ಶಾಲೆಗಳು ಮತ್ತು ಕಟ್ಟಡಗಳಂತಹ ಮೂಲಸೌಕರ್ಯಗಳ ನಿರ್ಮಾಣಕ್ಕೆ ಹಣ ಖರ್ಚು ಮಾಡುವ ಮೂಲಕ ಬಂಡವಾಳ ವೆಚ್ಚದಲ್ಲಿ ಹೆಚ್ಚಳ ಮಾಡಿದಾಗ ಅದು ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ. ಇದನ್ನು ಆರ್ಥಿಕತೆಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.

ಆದಾಗ್ಯೂ, ಕಳೆದ ಎರಡರಿಂದ ಮೂರು ವರ್ಷಗಳಲ್ಲಿ ಈ ಬೃಹತ್ ಮೂಲಸೌಕರ್ಯ ನಿಧಿಯ ಖರ್ಚು ಮಾಡುವಿಕೆ ಈಗಲೂ ಪ್ರತಿ ವರ್ಷ ಪಾವತಿಸಲಾಗುವ ಬಡ್ಡಿ ಮೊತ್ತಕ್ಕಿಂತ ಕಡಿಮೆ ಇದೆ. ಉದಾಹರಣೆಗೆ, ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಬಂಡವಾಳ ವೆಚ್ಚಕ್ಕಾಗಿ ದಾಖಲೆಯ 7.5 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಆದರೆ, ಇದು ಅದೇ ವರ್ಷಕ್ಕೆ ಪಾವತಿಸಲಾಗುವ ಬಡ್ಡಿಯ ಶೇಕಡಾ 80 ಕ್ಕಿಂತ ಕಡಿಮೆಯಾಗಿದೆ.

ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು:ಇತ್ತೀಚಿನ ಅಧಿಕೃತ ಅಂಕಿ - ಅಂಶಗಳ ಪ್ರಕಾರ, ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದ ಮೊದಲ 8 ತಿಂಗಳುಗಳಲ್ಲಿ (ಏಪ್ರಿಲ್-ನವೆಂಬರ್ 2022) 4.47 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಆದರೆ ಅದೇ ಅವಧಿಯಲ್ಲಿ 5.45 ಲಕ್ಷ ಕೋಟಿ ರೂಪಾಯಿಗಳನ್ನು ಬಡ್ಡಿ ಚುಕ್ತಾ ಮಾಡಲು ಪಾವತಿಸಲಾಗಿದೆ. ಇದು ಇತರ ವಿಷಯಗಳ ಜೊತೆಗೆ ರಸ್ತೆ, ಹೆದ್ದಾರಿ, ಬಂದರು ಮತ್ತು ವಿಮಾನ ನಿಲ್ದಾಣಗಳ ನಿರ್ಮಾಣದ ವೆಚ್ಚಕ್ಕಿಂತ ಶೇ 22 ರಷ್ಟು ಹೆಚ್ಚು.

ಇಷ್ಟೂ ಹಣ ಬಡ್ಡಿ ಪಾವತಿಗೆ ಖರ್ಚು:ಇದನ್ನೇ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ಸಂಪೂರ್ಣ ಕಾರ್ಪೊರೇಟ್ ತೆರಿಗೆ ಸಂಗ್ರಹ (ರೂ. 7.2 ಲಕ್ಷ ಕೋಟಿ) ಮತ್ತು ಕಸ್ಟಮ್ಸ್ ಸುಂಕ ಸಂಗ್ರಹ (ರೂ. 2.13 ಲಕ್ಷ ಕೋಟಿ) ಕೇವಲ ಬಡ್ಡಿ ಪಾವತಿಗಾಗಿಯೇ ಖರ್ಚಾಗುತ್ತದೆ.

ಇದನ್ನೂ ಓದಿ:ಕೇಂದ್ರ ಬಜೆಟ್ ತಯಾರಿಕೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖರ ತಂಡ ಹೀಗಿದೆ

Last Updated : Jan 25, 2023, 1:18 PM IST

ABOUT THE AUTHOR

...view details