ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದ ನಂತರ ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ. 2022-23ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಶೇಕಡಾ 9.7ರಷ್ಟು ಜಿಡಿಪಿ ಬೆಳವಣಿಗೆ ದಾಖಲಿಸಿದೆ. 2028-29ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗುವ ಹಾದಿಯಲ್ಲಿದೆ. ಇದರ ನಡುವೆ ಕೇಂದ್ರ ಸರ್ಕಾರ ಬಜೆಟ್ 2023-24ಅನ್ನು ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಇಂದಾಗಿದ್ದು, 2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಂತಿಮ ಪೂರ್ಣ ಪ್ರಮಾಣದ ಬಜೆಟ್ ಸಹ ಆಗಿದೆ. ಹೀಗಾಗಿ ಇಡೀ ದೇಶವೇ ಈ ಹಣಕಾಸು ವರ್ಷದ ಬಜೆಟ್ ಮಂಡನೆಗಾಗಿ ಕಾಯುತ್ತಿದೆ. ಈ ಬಜೆಟ್ ತಯಾರಿಕೆಯಲ್ಲಿ ಹಿಂದಿರುವ ಪ್ರಮುಖರ ತಂಡದ ಮಾಹಿತಿ ಇಲ್ಲಿದೆ.
ಟಿವಿ ಸೋಮನಾಥನ್:ತಮಿಳುನಾಡು ಕೇಡರ್‌ನ 1987ರ ಬ್ಯಾಚ್‌ನ ಐಎಎಸ್ ಅಧಿಕಾರಿ ಆಗಿರುವ ಟಿವಿ ಸೋಮನಾಥನ್ ಈ ಹಿಂದೆ ಕಾರ್ಪೊರೇಟ್ ವ್ಯವಹಾರಗಳ ಸಚಿವರ ಮತ್ತು 2015ರಿಂದ 2017ರವರೆಗೆ ಪ್ರಧಾನ ಮಂತ್ರಿ ಕಚೇರಿ (ಪಿಎಂಒ)ಯಲ್ಲಿ ಜಂಟಿ ಕಾರ್ಯದರ್ಶಿ ಆಗಿದ್ದರು. ಸೋಮನಾಥನ್ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಚಾರ್ಟರ್ಡ್ ಅಕೌಂಟೆಂಟ್ (ಸಿಎ) ವೆಚ್ಚ ಲೆಕ್ಕಪರಿಶೋಧಕ ಮತ್ತು ಕಂಪನಿ ಕಾರ್ಯದರ್ಶಿಯೂ ಆಗಿ ಸೇವೆ ಸಲ್ಲಿಸಿದ್ದಾರೆ. ಅರ್ಥಶಾಸ್ತ್ರ, ಹಣಕಾಸು ಮತ್ತು ಸಾರ್ವಜನಿಕ ನೀತಿಯ ಕುರಿತು ನಿಯತಕಾಲಿಕೆಗಳು ಮತ್ತು ಪತ್ರಿಕೆಗಳಲ್ಲಿ 80ಕ್ಕೂ ಹೆಚ್ಚು ಲೇಖನಗಳನ್ನೂ ಪ್ರಕಟಿಸಿದ್ದಾರೆ.
ಅಜಯ್ ಸೇಥಿ: ಕರ್ನಾಟಕ ಕೇಡರ್ 1987ರ ಬ್ಯಾಚ್ ಐಎಎಸ್ ಅಧಿಕಾರಿಯಾದ ಅಜಯ್ ಸೇಥಿ ಹಣಕಾಸು ಸಚಿವರ ತಂಡದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಎಲ್ಲ ದತ್ತಾಂಶವನ್ನು ಒಟ್ಟುಗೂಡಿಸುವ ಬಜೆಟ್ ವಿಭಾಗವು ಅಜಯ್ ಸೇಥಿ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಜಿ20 ಸೆಂಟ್ರಲ್ ಬ್ಯಾಂಕ್ ಮತ್ತು ಹಣಕಾಸು ಸಚಿವರ ಸಭೆಗಳನ್ನು ಸಹ ವಿಚಾರಣೆ ಮಾಡುವ ಹೆಚ್ಚುವರಿ ಜವಾಬ್ದಾರಿಯನ್ನು ಇವರು ಹೊಂದಿದ್ದಾರೆ. ಮೃದು ಸ್ವಭಾವದ ಸೇಥಿ ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ.
ವಿವೇಕ್ ಜೋಹ್ರಿ: ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ (CBIC) ಅಧ್ಯಕ್ಷರು ಮತ್ತು ಕೇಂದ್ರ ಸರ್ಕಾರದ ವಿಶೇಷ ಕಾರ್ಯದರ್ಶಿ ಈ ವಿವೇಕ್ ಜೋಹ್ರಿ. 1985ರ ಬ್ಯಾಚ್‌ನ ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆ ಅಧಿಕಾರಿಯಾಗಿರುವ ಜೋಹ್ರಿ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ವಿಚಾರದಲ್ಲಿ ಸೇವೆ ಸಲ್ಲಿಸಿದ್ದಾರೆ. ವಿಶೇಷವಾಗಿ ನೀತಿ ನಿರೂಪಣೆಯಲ್ಲಿ ಪಾತ್ರ ವಹಿಸಿದ್ದಾರೆ. ಜಿಎಸ್ಟಿ ಸದಸ್ಯರಾಗಿ ಹಲವಾರು ಪ್ರಮುಖ ಬದಲಾವಣೆಗಳನ್ನು ಕೈಗೊಳ್ಳುವಲ್ಲೂ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.