ನವದೆಹಲಿ: ಕೃತಕ ಬುದ್ದಿಮತ್ತೆ (AI) ಅಭಿವೃದ್ಧಿಪಡಿಸಲು ಮೂರು ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಜೆಟ್‌ನಲ್ಲಿ ಘೋಷಿಸಿದ್ದಾರೆ. 2023-24ನೇ ಬಜೆಟ್ ಮಂಡಿಸಿದ ಅವರು, "ಭಾರತದಲ್ಲಿ ಕೃತಕ ಬುದ್ದಿಮತ್ತೆಯ ಸಾಮರ್ಥ್ಯ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಕೇಂದ್ರ ಸ್ಥಾಪಿಸಲಿದ್ದೇವೆ." ಎಂದರು.
"ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೃತ್ತಕ ಬುದ್ದಿಮತ್ತೆಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಪ್ರಮುಖ ಉದ್ಯಮಗಳು ಸಂಶೋಧನೆ ನಡೆಸುವಲ್ಲಿ ಪಾಲುದಾರರಾಗುತ್ತಾರೆ. ಈ ತಂತ್ರಜ್ಞಾನದ ಅತ್ಯಾಧುನಿಕ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುತ್ತಾರೆ. ಆರೋಗ್ಯ, ಕೃಷಿ ಮತ್ತು ಸುಸ್ಥಿರ ನಗರಗಳ ಕ್ಷೇತ್ರಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ" ಎಂದು ತಿಳಿಸಿದರು.
"ಜಗತ್ತಿನಲ್ಲಿ ಕೃತಕ ಬುದ್ದಿಮತ್ತೆಯ ಕಲಿಕೆ ಮತ್ತು ಸಾಧನಗಳಾದ ಚಾಟ್ಜಿಪಿಟಿ(Chat GPT) ಹೊಸ ಅಲೆ ಎಬ್ಬಿಸುತ್ತಿದೆ. ಸರ್ಕಾರ ಕೂಡ ಕೃತಕ ಬುದ್ದಿಮತ್ತೆಯ ಅಧ್ಯಯನಕ್ಕೆ ಮಹತ್ವ ನೀಡುತ್ತಿದೆ. ಇದಕ್ಕಾಗಿ 'ಮೇಕ್ ಎಐ ಇನ್ ಇಂಡಿಯಾ' ಮತ್ತು 'ಮೇಕ್ ಎಐ ವರ್ಕ್ ಫಾರ್ ಇಂಡಿಯಾ' ಕೆಲಸ ಮಾಡುತ್ತವೆ." ಎಂದು ಹೇಳಿದರು.
ಏನಿದು ಕೃತಕ ಬುದ್ದಿಮತ್ತೆ?:ಕೃತಕ ಬುದ್ದಿಮತ್ತೆ ಮಾನವನ ಕಲಿಕಾ ಸಾಮರ್ಥ್ಯದ ಕಾರ್ಯವನ್ನು ಕಂಪ್ಯೂಟರ್ ಸಿಸ್ಟಂನಲ್ಲಿ ಪಡೆಯುವ ವ್ಯವಸ್ಥೆ. ಕಲಿಕೆ ಮತ್ತು ಸಮಸ್ಯೆ ನಿವಾರಣೆಯಲ್ಲೂ ಕೂಡ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಕೃತಕ ಬುದ್ದಿಮತ್ತೆ ಹೊಸ ಮಾಹಿತಿ ಕಲಿಯಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಬಳಸುವ ತಾರ್ಕಿಕತೆಯನ್ನು ಅನುಕರಿಸಲು ಕಂಪ್ಯೂಟರ್ ಸಿಸ್ಟಮ್ ಗಣಿತ ಮತ್ತು ತರ್ಕವನ್ನು ಬಳಸುತ್ತದೆ.
2020ರಲ್ಲಿ ಕೃತಕ ಬುದ್ಧಿಮತ್ತೆಯಲ್ಲಿ ಆವಿಷ್ಕಾರಗಳು ನಡೆದಿದ್ದು, ಮುಂದಿನ ಯುಗ ಕೃತಕ ಬುದ್ದಿಮತ್ತೆಯ ಯುಗವಾಗಲಿದೆ ಎಂಬುದನ್ನು ತಜ್ಞರು ತಿಳಿಸಿದ್ದಾರೆ. ಸುಧಾರಿತ ರೋಬೋಟ್‌ಗಳು, ಯಂತ್ರ ಕಲಿಕೆ ಚಾಟ್‌ಬಾಟ್‌ಗಳ ವ್ಯವಸ್ಥೆಗಳ ಲಾಭವನ್ನು ಜಗತ್ತು ಹೊಂದಲಿದೆ. ವಿಷಯಗಳನ್ನು ವೈಯಕ್ತೀಕರಿಸುವಲ್ಲಿ, ಗ್ರಾಹಕರ ಆಯ್ಕೆಯನ್ನು ಹೆಚ್ಚಿಸುವಲ್ಲಿ, ಉತ್ಪಾದನಾ ಪ್ರಕ್ರಿಯೆಯಲ್ಲಿನ ವೈಪರೀತ್ಯಗಳನ್ನು ಗುರುತಿಸುವಲ್ಲಿ, ವಂಚನೆ ಪತ್ತೆ ಹಚ್ಚುವಲ್ಲಿ ವಿವಿಧ ಕೈಗಾರಿಕೆಗಳ ಕಾರ್ಪೊರೇಟ್ ಸಂಸ್ಥೆಗಳು ಈಗಾಗಲೇ ಕೃತಕ ಬುದ್ಧಿಮತ್ತೆಯನ್ನು ನಿಯಂತ್ರಿಸುತ್ತಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ ಮುಂದಿನ ಭಾಗವಾಗಿ ಮಾನವರು ಮತ್ತು ರೊಬೊಟಿಕ್ಸ್ ಒಟ್ಟಾಗಿ ಕೆಲಸ ಮಾಡುವ ಭವಿಷ್ಯ ನಿಜವಾಗಲಿದೆ. 2025 ರ ಹೊತ್ತಿಗೆ, ಕೃತಕ ಬುದ್ಧಿಮತ್ತೆ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಥಾನ ಪಡೆಯಲಿದೆ. ನಮ್ಮ ದೈನಂದಿನ ಜೀವನದ ಅನೇಕ ಅಂಶಗಳಲ್ಲಿ ನಾವು ಈಗಾಗಲೇ ಇದನ್ನು ಅಳವಡಿಸಿಕೊಂಡಿದ್ದೇವೆ. ಪ್ರತಿಯೊಂದು ಉದ್ಯಮದಲ್ಲಿ ಕೃತಕ ಬುದ್ದಿಮತ್ತೆಯ ಮೂಲಕ ಉದ್ಯಮ ಕಂಪನಿಗಳು ಹೊಸ ಅವಕಾಶ ಮತ್ತು ಅವಿಷ್ಕಾರವನ್ನು ಕಂಡುಕೊಳ್ಳುತ್ತಿವೆ. ಇದು ಉತ್ಪನ್ನಗಳನ್ನು ಪರಿವರ್ತಿಸಲು ಸಹಾಯ ಮಾಡುತ್ತಿವೆ. ಮೌಲ್ಯಯುತವಾಗಿ ಸಾಮರ್ಥ್ಯ ಹೆಚ್ಚಿಸುತ್ತಿವೆ ಎಂದು ತಜ್ಞರು ಹೇಳಿದ್ದಾರೆ.
ಎಐ ತಂತ್ರಜ್ಞಾನಕ್ಕೆ ಕೇಂದ್ರ ಇಂಬು ನೀಡಿರುವ ಕುರಿತು ಪ್ರಶಂಸೆ ವ್ಯಕ್ತಪಡಿಸಿ ಮಾತನಾಡಿರುವ ಸಿಂಗಲ್ಇಂಟರ್ಫೆಸ್ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಗಿರೀಶ್ ಲಕ್ಷ್ಮಿನಾರಾಯಣ, "ಕೃತಕ ಬುದ್ದಿಮತ್ತೆ ಈಗಾಗಲೇ ಕ್ರಾಂತಿ ಮಾಡಿದೆ. ಎಐ ಬಳಕೆ ಮಾಡಿಕೊಳ್ಳುವ ಮೂಲಕ ಉದ್ಯಮ ಬೆಳೆಯುತ್ತಿದೆ" ಎಂದಿದ್ದಾರೆ.
ಇದನ್ನೂ ಓದಿ:ಚಾಟ್ಜಿಟಿಪಿಯನ್ನು ನಿಷೇಧಿಸಲು ಮುಂದಾದ ಶಿಕ್ಷಣ ತಜ್ಞರು