ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ರೈತರ ನಿಲುವಿಗೆ ಸಂಪೂರ್ಣವಾಗಿ ಬದ್ಧವಾಗಿದ್ದು, ಹಲವಾರು ಕೃಷಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನಾವು ಅನ್ನದಾತರ ಪರವಾಗಿದ್ದೇವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದರು.
ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆ, ಇಂದು ರೈತ ನಾಯಕರ ಜೊತೆ ದೆಹಲಿಯ ವಿಜ್ಞಾನ ಭವನದಲ್ಲಿ 5ನೇ ಸುತ್ತಿನ ಮಾತುಕತೆ ನಡೆಯಿತು. ಬಳಿಕ ಮಾತನಾಡಿದ ಅವರು, ಸರ್ಕಾರವು ರೈತರು ಕೋರಿದ ಎಲ್ಲ ಅಂಶಗಳನ್ನು ಪರಿಗಣಿಸುತ್ತದೆ. ರೈತ ಮುಖಂಡರಿಂದ ಸಲಹೆಗಳನ್ನು ಪಡೆದರೆ, ಪರಿಹಾರವನ್ನು ಕಂಡುಕೊಳ್ಳುವಲ್ಲಿ ನಮಗೆ ಸುಲಭವಾಗಲಿದೆ ಎಂದರು.