ಕಾಸರಗೋಡು (ಕೇರಳ):ಭೂತ, ದೆವ್ವ, ಪ್ರೇತ ವಾಸ್ತವವೇ ಅಥವಾ ಭ್ರಮೆಯೇ ಎಂಬ ಗೊಂದಲ ಹಿಂದಿನಿಂದಲೂ ಇದ್ದೇ ಇದೆ. ಈ ಬಗ್ಗೆ ಈವರೆಗೂ ಚರ್ಚೆಗಳು ನಡೆಯುತ್ತಲೇ ಇವೆ. ಇದರ ನಡುವೆಯೇ ಕಾಸರಗೋಡು ಜಿಲ್ಲೆಯ ಚೆರುವತ್ತೂರನಲ್ಲಿ ಇಂತಹದೊಂದು ಘಟನೆ ಮತ್ತೆ ಮುನ್ನೆಲೆಗೆ ಬಂದಿದೆ. ವ್ಯಕ್ತಿಯೊಬ್ಬ ಕಾರಿನಲ್ಲಿ ಪ್ರಯಾಣಿಸುವ ವೇಳೆ ಸೀಟು ಬೆಲ್ಟ್ ಧರಿಸದೇ ಚಾಲನೆ ಮಾಡುತ್ತಿರುವುದನ್ನು ಗಮನಿಸಿದ ಸಾರಿಗೆ ಇಲಾಖೆ ಅಳವಡಿತ AI ಕ್ಯಾಮರಾ ದಂಡ ವಿಧಿಸಲು ಚಿತ್ರವನ್ನು ಸೆರೆಹಿಡಿದಿದೆ. ಆದರೇ ಈ ದೃಶ್ಯದಲ್ಲಿ ಹಿಂಬದಿ ಸೀಟಿನಲ್ಲಿ ಯಾರೊ ಅಪರಿಚಿತ ಮಹಿಳೆ ಕುಳಿತಿರುವುದು ಸೆರೆಯಾಗಿದ್ದು, ಇದನ್ನು ಕಂಡು ಕಾರಿನ ಮಾಲೀಕ ಬೆಚ್ಚಿ ಬಿದ್ದಿದ್ದಾನೆ.
ಹೌದು, ನಿನ್ನೆ ಕೈತಕ್ಕಾಡ್‌ನ ಪಡಣ್ಣ ಎಂಬುವವರು ಕುಟುಂಬ ಸಮೇತವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ಸೀಟ್ ಬೇಲ್ಟ್ ಧರಿಸದೇ ವಾಹನ ಚಾಲನೆ ಮಾಡುತ್ತಿದ್ದರು. ಪಯ್ಯನ್ನೂರು ಸಮೀಪದ ಕೆಲೋತ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಐ ಕ್ಯಾಮೆರಾ ಕಾರು ಸಮೇತ ಆ ವ್ಯಕ್ತಿಯ ಚಿತ್ರವನ್ನು ಸೆರೆ ಹಿಡಿದಿತ್ತು. ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆಂದು ದಂಡ ವಿಧಿಸಿ ಪಡಣ್ಣ ಅವರ ಮನೆಗೆ AI ಕ್ಯಾಮರಾ ಸೆರೆ ಹಿಡಿದ ಚಿತ್ರದೊಂದಿಗೆ ಚಲನ್ ಅನ್ನು ಸಾರಿಗೆ ಇಲಾಖೆ ಕಳುಹಿಸಿತ್ತು. ಇದನ್ನು ಗಮನಿಸಿದ ಪಡಣ್ಣ ಅವರಿಗೆ ಕಾರಿನ ಹಿಂಬದಿ ಸೀಟಿನಲ್ಲಿ ಅಪರಿಚಿತ ಮಹಿಳೆ ಕುಳಿತಿರುವುದು ಕಂಡು ಹೌಹಾರಿದ್ದಾರೆ. ಕೂಡಲೆ ಸಾರಿಗೆ ಇಲಾಖೆಗೆ ಕರೆ ಮಾಡಿ ಈ ಬಗ್ಗೆ ತಿಳಿಸಿದ್ದಾರೆ.
ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ, ಎಐ ಕ್ಯಾಮರಾ ಸೆರೆ ಹಿಡಿದಿರುವ ದೃಶ್ಯ ತಾಂತ್ರಿಕ ಸಮಸ್ಯೆಯಿಂದ ಆರೀತಿ ಮಹಿಳೆ ಪ್ರತಿರೂಪ ಕಾಣಿಸಿರಬಹುದು. ಈ ಬಗ್ಗೆ ಹೆಚ್ಚಿನ ಸ್ಪಷ್ಟಿಕರಣಕ್ಕಾಗಿ ಕ್ಯಾಮರಾವನ್ನು ತಯಾರಿಸಿದ ಕೆಲ್ಟ್ರಾನ್ ಕಂಪನಿಗೆ ಫೋಟೋವನ್ನು ಕಳುಹಿಸಲಾಗಿದೆ ಎಂದು ಪಡಣ್ಣ ಅವರಿಗೆ ತಿಳಿಸಿದ್ದಾರೆ.