ತಿರುವನಂತಪುರಂ, ಕೇರಳ :ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡುವೆ ಅಪವಿತ್ರ ಮೈತ್ರಿಯಿದೆ ಎಂದು ಆರೋಪಿಸಿ, ಕೇರಳ ಪ್ರತಿಪಕ್ಷದ ನಾಯಕರು ಶುಕ್ರವಾರ ವಿಧಾನಸಭೆಯಿಂದ ಹೊರನಡೆದು, ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬಜೆಟ್ ಅಧಿವೇಶನದ ಮೊದಲ ದಿನ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿಧಾನಸಭೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾಗ ಪ್ರತಿಭಟನೆ ನಡೆಸಿದ ವಿಪಕ್ಷ ನಾಯಕರು, ರಾಜ್ಯಪಾಲರು ಮತ್ತು ಸಿಎಂ ಅವರ ನಡುವೆ ಅಪವಿತ್ರ ಮೈತ್ರಿ ಇದೆ ಎಂದು ಆರೋಪಿಸಿ ಸಭಾತ್ಯಾಗ ಮಾಡಿದ್ದಾರೆ.
ಕಣ್ಣೂರು ವಿವಿಯ ಉಪಕುಲಪತಿ ಗೋಪಿನಾಥ್ ರವೀಂದ್ರನ್ ಅವರ ಮರು ನೇಮಕ ಮತ್ತು ಲೋಕಾಯುಕ್ತ ಕಾಯ್ದೆ-1999ರ ತಿದ್ದುಪಡಿಗೆ ರಾಜ್ಯಪಾಲರು ಒಪ್ಪಿಗೆ ನೀಡಿದ ವಿಷಯಗಳ ಕುರಿತು ಚರ್ಚೆ ನಡೆಸಬೇಕೆಂದು ಒತ್ತಾಯಿಸಿ, ಪ್ರತಿಪಕ್ಷಗಳು ಪ್ರತಿಭಟನೆ ವೇಳೆ ಘೋಷಣೆಗಳನ್ನು ಕೂಗಿದವು.
ಬಿಜೆಪಿ ನಾಯಕ ಹರಿ ಎಸ್ ಕರ್ತಾ ಅವರನ್ನು ರಾಜ್ಯಪಾಲರ ಆಪ್ತ ಸಿಬ್ಬಂದಿಯಾಗಿ ನೇಮಕ ಮಾಡಲು ಸರ್ಕಾರ ಒಪ್ಪಿಗೆ ನೀಡಿದ್ದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಯಿತು.
ರಾಜ್ಯಪಾಲರ ವೈಯಕ್ತಿಕ ಸಿಬ್ಬಂದಿ ನೇಮಕವನ್ನು ಅನುಮೋದಿಸುವಾಗ ಸಾಮಾನ್ಯ ಆಡಳಿತ ಇಲಾಖೆ (ಜಿಎಡಿ) ಕಾರ್ಯದರ್ಶಿ ಅಸಮ್ಮತಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಕಾರ್ಯದರ್ಶಿಯನ್ನು ಹುದ್ದೆಯಿಂದ ತೆಗೆದು ಹಾಕಿದ್ದಾರೆ ಎಂದು ವಿಪಕ್ಷಗಳ ಮುಖಂಡರು ಆರೋಪಿಸಿದ್ದಾರೆ. ಇದರ ಜೊತೆಗೆ ವಿಧಾನಸಭೆಯಲ್ಲೇ ಗವರ್ನರ್ ಗೋ ಬ್ಯಾಕ್ ಎಂದು ಘೋಷಣೆಗಳನ್ನು ಕೂಗಲಾಯಿತು.
ಇದನ್ನೂ ಓದಿ:ಅಹೋರಾತ್ರಿ ಧರಣಿ ವೇಳೆ ಕೈ ನಾಯಕರ ಚಿಂತನ-ಮಂಥನ ಸಭೆ.. ಸಿದ್ದು-ಡಿಕೆಶಿ ಒಗ್ಗಟ್ಟಿಗೆ ಶಾಸಕರ ಸಲಹೆ..
ಇದೇ ವೇಳೆ ಪ್ರತಿಪಕ್ಷದ ನಾಯಕ ವಿ ಡಿ ಸತೀಶನ್ ಮಾತನಾಡಿ, 'ರಾಜ್ಯಪಾಲರು ಕಣ್ಣೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಮರುನೇಮಕ ಸೇರಿದಂತೆ ಕೇರಳ ಸರ್ಕಾರದ ಕಾನೂನು ಬಾಹಿರ ಚಟುವಟಿಕೆಗಳಿಗೆ ಬೆಂಬಲ ನೀಡಿದ್ದಾರೆ. ರಾಜ್ಯಪಾಲರು ಬಿಜೆಪಿಯ ರಾಜಕೀಯ ಏಜೆಂಟರಂತೆ ವರ್ತಿಸುತ್ತಿದ್ದಾರೆ.
ರಾಜ್ಯಪಾಲರ ಆಪ್ತ ಸಿಬ್ಬಂದಿಗೆ ಬಿಜೆಪಿ ನಾಯಕನ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರ್ಯದರ್ಶಿಯನ್ನು ಹುದ್ದೆಯಿಂದ ತೆಗೆದು ಹಾಕಿದ್ದಾರೆ. ಇದು ಸಂವಿಧಾನ ಬಾಹಿರವಾಗಿದೆ. ಭಾರತೀಯ ಸಂವಿಧಾನದ 163ನೇ ವಿಧಿ ಪ್ರಕಾರ ಕ್ಯಾಬಿನೆಟ್ ಅನುಮೋದನೆ ನೀಡಿದ್ದಕ್ಕೆ ಮಾತ್ರ ರಾಜ್ಯಪಾಲರು ಸಹಿ ಹಾಕಲು ಬದ್ಧರಾಗಿದ್ದಾರೆ. ಆದರೆ, ಇಲ್ಲಿ ರಾಜ್ಯಪಾಲರು ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಷ್ಟೇ ಅಲ್ಲ, ಖಂಡಿತವಾಗಿಯೂ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವೆ ಹಾಗೂ ಬಿಜೆಪಿ ಮತ್ತು ಸಿಪಿಎಂ ನಡುವೆಯೂ ಅಪವಿತ್ರ ನಂಟು ಇದೆ. ಮಧ್ಯವರ್ತಿಗಳು ಅವರ ನಡುವೆಯೇ ಕೆಲಸ ಮಾಡಿ ಸಮಸ್ಯೆ ಇತ್ಯರ್ಥಪಡಿಸುತ್ತಿದ್ದಾರೆ ಎಂದು ಸತೀಶನ್ ಹೇಳಿದ್ದಾರೆ.