ಕೊಯಂಬತ್ತೂರು (ತಮಿಳುನಾಡು): ಕೊಯಂಬತ್ತೂರಿನ ಅಣ್ಣೂರು ಸಮೀಪದ ಪೂಲುಪಾಳ್ಯಂ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಚರಂಡಿ ನಿರ್ಮಾಣ ಕಾಮಗಾರಿ ನಡೆಸಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಅರುಂಧತಿಯಾರ್ ಸಮುದಾಯದ ಜನ ವಾಸವಿರುವ ಈ ಪ್ರದೇಶದಲ್ಲಿ ಮೂರು ತಿಂಗಳ ಹಿಂದೆ ತ್ಯಾಜ್ಯ ನೀರು ಚರಂಡಿ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಇದಕ್ಕೊಪ್ಪದ ಮತ್ತೊಂದು ಬಡಾವಣೆ ಜನ ಚರಂಡಿ ನೀರು ಹಾದು ಹೋಗುವುದರಿಂದ ಸೊಳ್ಳೆಗಳು ಹೆಚ್ಚಾಗುತ್ತವೆ. ಅದರಿಂದ ಸಾಂಕ್ರಾಮಿಕ ರೋಗ ಉಂಟಾಗುತ್ತದೆ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು.
ಈ ಬಗ್ಗೆ ಪಂಚಾಯಿತಿ ಕಚೇರಿಯಲ್ಲಿ ಹಲವಾರು ಬಾರಿ ಚರ್ಚೆ ಮಾಡಲಾಗಿತ್ತು. ಇತ್ತೀಚೆಗ ನಡೆದ ಚರ್ಚೆ ಬಳಿಕ ಚರಂಡಿ ನಿರ್ಮಾಣ ಪುನರಾರಂಭಿಸಲು ಸೂಚಿಸಲಾಗಿತ್ತು. ಇದರ ನಂತರವೂ ತೀವ್ರವಾಗಿ ವಿರೋಧಿಸಿದ ಜನ ಚರಂಡಿ ಕಾಮಗಾರಿಗೆ ಅಡ್ಡಿ ಪಡಿಸಿ ತಡೆಯೊಡ್ಡಿದ್ದರು. ಇದರಿಂದ ಬೇಸತ್ತ ಅಧಿಕಾರಿಗಳು ಒಳಚರಂಡಿ ನಿರ್ಮಾಣಕ್ಕೆ ವಿರೋಧ ವ್ಯಕ್ತ ಪಡಿಸಲಾಗುತ್ತಿದೆ ಎಂದು ಖುದ್ದು ಕೊಯಂಬತ್ತೂರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಜೂ.20ರಂದು 10ಕ್ಕೂ ಹೆಚ್ಚು ಪೊಲೀಸರ ಭದ್ರತೆಯೊಂದಿಗೆ ತ್ಯಾಜ್ಯ ನೀರು ಚರಂಡಿ ನಿರ್ಮಾಣ ಕಾರ್ಯ ಆರಂಭ ಮಾಡಲಾಯಿತು. ಪೊಲೀಸ್ ಭದ್ರತೆಯೊಂದಿಗೆ ಚರಂಡಿ ನಿರ್ಮಾಣ ಕಾರ್ಯ ಸಾಗುತ್ತಿದೆ.
ಅಪರ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಚರಂಡಿ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, "ಪಟ್ಟಣದ ಒಳಗಡೆ ಹಾಗೂ ಪಟ್ಟಣದಿಂದ ಪೂರ್ವ ಕಾಲುವೆಗೆ ಹೋಗುವ ಮಾರ್ಗದಲ್ಲಿ ಯಂತ್ರಗಳ ಸಹಾಯದಿಂದ 4 ಅಡಿ ಅಗಲ ಹಾಗೂ 3 ಅಡಿ ಆಳದ ಗುಂಡಿ ತೋಡಲಾಗಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು" ಎಂದು ಅಧಿಕಾರಿಗಳು ತಿಳಿಸಿದರು.