ನವದೆಹಲಿ:ಈ ವಾರದಲ್ಲಿ ದೆಹಲಿ ಪೊಲೀಸರು ಸುಮಾರು ಆರು ಮಂದಿ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಈ ಬಂಧಿತ ಭಯೋತ್ಪಾದಕರಲ್ಲಿ ಒಬ್ಬನಾದ ಒಸಾಮಾನ ಚಿಕ್ಕಪ್ಪ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಹೆಮುದ್ ರೆಹಮಾನ್ ಶುಕ್ರವಾರ ಪ್ರಯಾಗರಾಜ್‌ನ ಕರೇಲಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಿಗೆ ಐಇಡಿಗಳನ್ನು ಸಾಗಿಸಲು ಸಹಕಾರ ನೀಡುತ್ತಿದ್ದ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಇದರ ಜೊತೆಗೆ ದೇಶಾದ್ಯಂತ ಉದ್ದೇಶಿತ ಕೊಲೆಗಳು ಮತ್ತು ಸ್ಫೋಟಗಳನ್ನು ನಡೆಸಲು ಹೆಮುದ್ ರೆಹಮಾನ್ ಪ್ಲಾನ್ ರೂಪಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದು, ಇದೇ ಮಂಗಳವಾರ ಒಸಾಮಾ ಸೇರಿ ಐದು ಮಂದಿ ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದರು.
ರೆಹಮಾನ್ ಲಖನೌಗೆ ಕರೆತರಲಾಗುತ್ತಿದೆ. ಅಲ್ಲಿಂದ ಆತನನ್ನು ದೆಹಲಿಗೆ ಕರೆತರಲಾಗುತ್ತದೆ. ಮಂಗಳವಾರ ಬಂಧಿಸಲಾಗಿದ್ದ ಎಲ್ಲಾ ಭಯೋತ್ಪಾದಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಆರು ಮಂದಿಯಿದ್ದ ಭಯೋತ್ಪಾದಕ ಸಂಘಟನೆಯ ಘಟಕವನ್ನು ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ನಿರ್ವಹಿಸುತ್ತಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿವೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ನಿಂದ 15 ದಿನ ತರಬೇತಿ ಪಡೆದ ಇಬ್ಬರು ಭಯೋತ್ಪಾದಕರು ದೇಶದಲ್ಲಿ ರಾಸಾಯನಿಕಗಳನ್ನು ಬಳಸಿ ಬಾಂಬ್ ದಾಳಿ ನಡೆಸಲು ಬಂದಿದ್ದಾರೆ ಎಂಬ ಮಾಹಿತಿ ವಿಚಾರಣೆ ವೇಳೆ ಬಹಿರಂಗವಾಗಿದೆ.
ಇಂದು ಬೆಳಗ್ಗೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಮತ್ತು ಮುಂಬೈ ಅಪರಾಧ ವಿಭಾಗದ ಪೊಲೀಸರ ಜಂಟಿ ತಂಡವು ಮುಂಬೈ ನಗರದ ಜೋಗೇಶ್ವರಿ ಪ್ರದೇಶದಲ್ಲಿ ಶಂಕಿತ ಭಯೋತ್ಪಾದಕನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಮುಂಬೈನಲ್ಲಿ ಓರ್ವ ಶಂಕಿತ ಭಯೋತ್ಪಾದಕನ ಬಂಧಿಸಿದ ಎಟಿಎಸ್