ಬೆಂಗಳೂರು:ಜಾಗತಿಕ ಆರ್ಥಿಕ ಕುಸಿತದ ಭೀತಿ ಉದ್ಯೋಗಿಗಳಲ್ಲಿ ಅಭದ್ರತೆ ಭಾವ ಮೂಡಿಸಿದೆ. ಜಾಗತಿಕ ಆರ್ಥಿಕ ಪ್ರಗತಿ ಕುಂಠಿತದಿಂದ ಮುಂದಿನ ದಿನಗಳಲ್ಲಿ ಐಟಿ ಕಂಪನಿಗಳಲ್ಲಿ ಹಿಂಜರಿತ ಕಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೈತ್ಯ ಟೆಕ್ ಕಂಪನಿಗಳಾದ ಟ್ವಿಟರ್, ಫೇಸ್ಬುಕ್ ತಮ್ಮ ನೌಕರರ ವಜಾಗೆ ಮುಂದಾಗಿವೆ. ಈ ಸಾಲಿಗೆ ಈಗ ಬೆಂಗಳೂರಿನ ಮೂಲದ ಸ್ಟಾರ್ಟ್ ಅಪ್ ಕಂಪನಿ ಕೂಡ ಸೇರ್ಪಡೆಯಾಗಿದೆ. ಪ್ರಮುಖ ಎಜುಟೆಕ್ ಸಂಸ್ಥೆಯಾಗಿರುವ ಅನ್‌ಅಕಾಡೆಮಿ ಸೋಮವಾರ ತನ್ನ ಸಂಸ್ಥೆಯ ಶೇ 10 ರಷ್ಟು ಅಂದರೆ ಸರಿ ಸುಮಾರು 350 ಉದ್ಯೋಗಿಗಳನ್ನು ವಜಾ ಮಾಡಿದೆ.
ಈ ಸಂಬಂಧ ಸಂಸ್ಥೆಯ ಸಿಇಒ ಹಾಗೂ ಸಹ ಸಂಸ್ಥಾಪಕರಾಗಿರುವ ಗೌರವ್ ಮುಂಜಲ್ ಉದ್ಯೋಗಿಗಳಿಗೆ ಇಮೇಲ್ ಮೂಲಕ ಸಂದೇಶ ಕಳುಹಿಸಿದ್ದಾರೆ. ಸಂಸ್ಥೆಯ ಶೇ 10ರಷ್ಟು ಉದ್ಯೋಗಿಗಳು ಇದರ ಪರಿಣಾಮ ಎದುರಿಸುತ್ತಿದ್ದಾರೆ. ಅದರಲ್ಲಿ ನೀವು ಒಬ್ಬರು. ಈ ಸಂಬಂಧ ಮುಂದಿನ 48 ಗಂಟೆಗಳೊಳಗೆ ನೀವು ಎಚ್ಆರ್ ಕಡೆಯಿಂದ ವಿವರವಾದ ಮಾಹಿತಿ ಪಡೆಯುತ್ತೀರಾ ಎಂದ ಇಮೇಲ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಮಾತನಾಡಿರುವ ಅನ್‌ಅಕಾಡೆಮಿ ಸಿಇಒ, ಪರಿಸ್ಥಿತಿ ಸಾಕಷ್ಟು ಹದಗೆಡುತ್ತಿದೆ. ಈ ಬಗ್ಗೆ ಅರಿತು ಕೆಲವು ಕ್ರಮ ಕೈಗೊಂಡರೂ ಅದು ಸಾಧ್ಯವಾಗಲಿಲ್ಲ. ನಮ್ಮ ಖರ್ಚು ವೆಚ್ಚ ನಿಯಂತ್ರಣ, ಮಾರ್ಕೆಟಿಂಗ್ ಬಜೆಟ್ ಸೀಮಿತಕ್ಕೆ ಕ್ರಮ ಸೇರಿದಂತೆ ಹಲವು ಕಾರ್ಯಕ್ಕೆ ಮುಂದಾದರೂ ಅದು ಸಾಕಾಗಲಿಲ್ಲ.