ಶಿಮ್ಲಾ (ಹಿಮಾಚಲ ಪ್ರದೇಶ): ಮಾರುಕಟ್ಟೆಗೆ ಹೋಗಲು ಸಾಧ್ಯವಾಗದೇ ಆಕ್ರೋಶಗೊಂಡ ರೈತರು ಬುಟ್ಟಿ ಬುಟ್ಟಿ ಸೇಬುಗಳನ್ನು ರಸ್ತೆ ಬದಿಯ ಝರಿಗೆ ಎಸೆದಿರುವ ಘಟನೆ ಇಲ್ಲಿನ ರೋಹ್ರು ಪಟ್ಟಣದಲ್ಲಿ ನಡೆದಿದೆ. ಸೇಬು ಬೆಳೆಗಾರರಾದ ಮೂವರು ರೈತರು ಸ್ಥಳೀಯ ತಹಶೀಲ್ದಾರ್ಗೆ ದೂರು ನೀಡಿ, ಭೂಕುಸಿತದಿಂದ ರಸ್ತೆಗಳು ಮುಚ್ಚಿ ಹೋಗಿದ್ದು, ಮಾರುಕಟ್ಟೆಗೆ ಹೋಗಿ ಸೇಬುಗಳನ್ನು ಮಾರಲು ಅಸಾಧ್ಯವಾಗಿದೆ. ಹೀಗಾಗಿ ಬೆಳೆಯನ್ನು ನೀರಿಗೆಸೆದಿದ್ದೇವೆ ಎಂದು ತಿಳಿಸಿದ್ದಾರೆ.
ಬೆಳೆಗಾರರು ಸೇಬುಗಳನ್ನು ಎಸೆಯುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ರೋಹ್ರು ಪಟ್ಟಣದ ರಸ್ತೆಬದಿ ಪಿಕಪ್ ವಾಹನ ನಿಲ್ಲಿಸಿ ಎಸೆಯುತ್ತಿರುವುದನ್ನು ಕಾಣಬಹುದು. ರೈತರು ಒಂದೊಂದೇ ಬುಟ್ಟಿಗಳನ್ನು ತಂದು ನೂರಾರು ಸೇಬುಗಳನ್ನು ನೀರಿಗೆ ಬಿಡುತ್ತಿರುವುದು ದೃಶ್ಯದಲ್ಲಿದೆ.
ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು ಗ್ರಾಮವನ್ನು ಮುಖ್ಯರಸ್ತೆಗೆ ಸಂಪರ್ಕಿಸುವ ಬ್ಲಸಾನ್-ಚಾನ್ರಿ-ಪದ್ಸಾರಿ ರಸ್ತೆಯನ್ನು ಜುಲೈ 9ರಿಂದ ಮುಚ್ಚಲಾಗಿದೆ. ಇದರಿಂದಾಗಿ ಬೆಳೆಗಾರರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ತಲುಪಿಸಲಾಗುತ್ತಿಲ್ಲ. ಸುಮಾರು 68 ಕ್ರೇಟ್ ಸೇಬುಗಳನ್ನು ಮೂವರು ರೈತರು ರಸ್ತೆ ಬದಿಯ ಝರಿಯಲ್ಲಿ ಬಿಟ್ಟಿದ್ದಾರೆ.
ಘಟನೆಗೆ ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಶನಿವಾರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೇ ಮುಚ್ಚಲಾಗಿದ್ದ ರಸ್ತೆಯನ್ನು ಭಾನುವಾರ ತೆರೆಯಲಾಗಿದೆ.