ಗೋಪಾಲಪೇಟೆ(ತೆಲಂಗಾಣ): ಮಾವನ ಲೈಂಗಿಕ ಕಿರುಕುಳದಿಂದ ಬೇಸತ್ತ ಸೊಸೆ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಗ ಸಾವನ್ನಪ್ಪಿದ್ದಾಗಿ ವರದಿಯಾಗಿದೆ.
ವನಪರ್ತಿ ಜಿಲ್ಲೆಯ ಗೋಪಾಲಪೇಟೆ ಮಂಡಲದ ಪೆದ್ದರಾಮುಲು(52) ಅವರ ಪುತ್ರ ಕಳೆದ ಆರು ತಿಂಗಳ ಹಿಂದೆ ಅದೇ ಗ್ರಾಮದ ಯುವತಿ ಜೊತೆ ಪ್ರೇಮ ವಿವಾಹ ಮಾಡಿಕೊಂಡಿದ್ದರು. ಇದಾದ ಬಳಿಕ ಗಂಡ-ಹೆಂಡತಿ ಹೈದರಾಬಾದ್ನಲ್ಲಿ ಕೆಲಸ ಮಾಡಲು ಶುರು ಮಾಡಿದ್ದರು. ಆದರೆ, ಗಂಡ ಕುಡಿತದ ಚಟಕ್ಕೊಳಗಾದ ಕಾರಣ ಊರಿಗೆ ವಾಪಸ್ ಆಗಿದ್ದರು. ಮನೆಯಲ್ಲಿ ಪತಿ ಇಲ್ಲದ ವೇಳೆ ಮಾವ ಪೆದ್ದರಾಮುಲು ಸೊಸೆಗೆ ಕಿರುಕುಳ ನೀಡುತ್ತಿದ್ದರು. ಇದರ ಬಗ್ಗೆ ನೆರೆಹೊರೆಯವರಿಗೆ ಹೇಳಿದರೂ ಅವರು ನಂಬಿರಲಿಲ್ಲ. ಹೀಗಾಗಿ, ಘಟನೆ ಬಗ್ಗೆ ರಹಸ್ಯವಾಗಿ ವಿಡಿಯೋ ಮಾಡಿದ್ದಳು.
ಮಾವನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಸೊಸೆಯಿಂದ ಹಲ್ಲೆ ಮೇ. 16ರಂದು ಮಾವನೊಂದಿಗೆ ಸೊಸೆ ಹೊಲಕ್ಕೆ ಹೋದಾಗ ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದಾನೆ. ಈ ವೇಳೆ, ಸಹೋದರ ಶಿವನಿಗೆ ಫೋನ್ ಮಾಡಿ, ಮಾಹಿತಿ ನೀಡಿದ್ದಾಳೆ. ಘಟನಾ ಸ್ಥಳಕ್ಕೆ ಆತ ಬರುತ್ತಿದ್ದಂತೆ ಮಾವನ ಮೇಲೆ ಸೊಸೆ ಕೋಲಿನಿಂದ ಹಲ್ಲೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಗೋಪಾಲಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಅನಾಥ ಶಿಶುವಿಗೆ ಎದೆ ಹಾಲುಣಿಸಿದ 'ಭಿಕ್ಷುಕಿ'.. ತಾಯಿ ಪ್ರೀತಿಗೊಂದು ಸಲಾಂ!
ಘಟನಾ ಸ್ಥಳಕ್ಕಾಗಮಿಸಿರುವ ಪೊಲೀಸರು ತಕ್ಷಣವೇ ರಾಮುಲುನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಿದ್ದಾರೆ. ತದನಂತರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಆದರೆ, ನೋವು ಸಹಿಸಲು ಸಾಧ್ಯವಾಗದ ಕಾರಣ ಆತ ನರಳಾಡಿದ್ದಾನೆ. ಹೀಗಾಗಿ, ತಕ್ಷಣವೇ ವನಪರ್ತಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ತಪಾಸಣೆ ನಡೆಸಲು ಮುಂದಾಗುವುದಕ್ಕೂ ಮುಂಚಿತವಾಗಿ ಆತ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪ್ರಭಾರಿ ಪೊಲೀಸ್ ವರಿಷ್ಠಾಧಿಕಾರಿ ರಂಜನ್ ರತನ್ ಕುಮಾರ್, ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಪೆದ್ದರಾಮುಲು ಅವರ ಪುತ್ರ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಈಗಾಗಲೇ ಆರೋಪಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾಗಿ ತಿಳಿಸಿದ್ದಾರೆ.
ಪೆದ್ದರಾಮುಲು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆ ವೇಳೆ ಸಂಬಂಧಿಕರು, ಕುಟುಂಬಸ್ಥರು ಸೊಸೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮೃತದೇಹವನ್ನ ನಡುರಸ್ತೆಯಲ್ಲಿಟ್ಟು ಪ್ರತಿಭಟನೆ ಸಹ ನಡೆಸಿದರು. ಪೊಲೀಸರು ಸ್ಥಳಕ್ಕಾಗಮಿಸಿದ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ.