ಲಖನೌ:ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ಅವರ ಇಬ್ಬರು ಗನ್ಮ್ಯಾನ್ಗಳಲ್ಲಿ ಒಬ್ಬರಾದ ರಾಘವೇಂದ್ರ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಅವರನ್ನು ಲಖನೌನ ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆಗೆ (ಪಿಜಿಐ) ಸಾಗಿಸಲು ಇಂದು ಸುಮಾರು 230 ಕಿಮೀ ಗ್ರೀನ್ ಕಾರಿಡಾರ್ ವ್ಯವಸ್ಥೆಯನ್ನು ಮಾಡಲಾಯಿತು.
ಶುಕ್ರವಾರ ಪ್ರಯಾಗ್ರಾಜ್ನ ಸುಲೇಮ್ ಸರಾಯ್ ಪ್ರದೇಶದಲ್ಲಿ ಮನೆಗೆ ತೆರಳುತ್ತಿದ್ದ ಉಮೇಶ್ ಪಾಲ್ ಹಾಗೂ ಅವರ ಇಬ್ಬರು ಗನ್ಮ್ಯಾನ್ಗಳ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ವಕೀಲ್ ಉಮೇಶ್ ಪಾಲ್ ಹಾಗೂ ಉಮೇಶ್ ಪಾಲ್ ಅವರನ್ನು ರಕ್ಷಿಸಲು ಪ್ರಯತ್ನಪಟ್ಟ ಗನ್‌ಮ್ಯಾನ್ ಸಂದೀಪ್ ನಿಶಾದ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನೊಬ್ಬ ಗನ್‌ಮ್ಯಾನ್ ರಾಘವೇಂದ್ರ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಅಪತರಿಚಿತ ದಾಳಿಕೋರರು ಉಮೇಶ್ ಮತ್ತು ಅವರ ಇಬ್ಬರು ಗನ್ಮ್ಯಾನ್ಗಳ ಮೇಲೆ ಹಲವು ಸುತ್ತು ಗುಂಡು ಹಾರಿಸಿರುವುದು ಮಾತ್ರವಲ್ಲದೆ ಬಾಂಬ್‌ಗಳನ್ನು ಎಸೆದಿದ್ದರು ಎಂದು ವರದಿಯಾಗಿದೆ. ಇದರಿಂದಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ವೈದ್ಯರ ಸಲಹೆ ಮೇರೆ ಪ್ರಯಾಗರಾಜ್ ಆಸ್ಪತ್ರೆಯಿಂದ ಲಖನೌ ಆಸ್ಪತ್ರೆಗೆ ವರ್ಗಾಯಿಸಲಾಯಿತು. ವೈದ್ಯರ ನಿಕಟ ಮೇಲ್ವಿಚಾರಣೆಯಲ್ಲಿ ವಿಶೇಷ ಆಂಬ್ಯುಲೆನ್ಸ್‌ನಲ್ಲಿ ಅವರನ್ನು ಲಖನೌಗೆ ಕರೆದೊಯ್ಯಲು ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಯಿತು.
ಅಧಿಕೃತ ಮೂಲಗಳ ಪ್ರಕಾರ, ಪ್ರಯಾಗ್‌ರಾಜ್‌ನಿಂದ ಲಖನೌವರೆಗೆ ಸುಮಾರು 230 ಕಿಲೋಮೀಟರ್‌ಗಳವರೆಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ವಾಹನಗಳ ಬೆಂಗಾವಲಿನಲ್ಲಿ ಬಂದಿದ್ದ ಆಂಬ್ಯುಲೆನ್ಸ್‌ನಲ್ಲಿ ರಾಘವೇಂದ್ರ ಅವರೊಂದಿಗೆ ನಾಲ್ವರು ವೈದ್ಯರು ಮತ್ತು ಮೂವರು ಅರೆವೈದ್ಯಕೀಯ ಸಿಬ್ಬಂದಿಯೂ ತೆರಳಿದ್ದಾರೆ. ಗಾಯಗೊಂಡ ಗನ್‌ಮ್ಯಾನ್ ಅನ್ನು ಹೆಚ್ಚಿನ ಸುಧಾರಿತ ಚಿಕಿತ್ಸೆಗಾಗಿ ಪಿಜಿಐನಲ್ಲಿನ ಐಸಿಯು ವಾರ್ಡ್‌ಗೆ ಶಿಫ್ಟ್ ಮಾಡಲಾಯಿತು.