ಭೋಪಾಲ್(ಮಧ್ಯಪ್ರದೇಶ):ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಒತ್ತಾಯಿಸುತ್ತಿರುವ ಬಿಜೆಪಿ ಹಿರಿಯ ನಾಯಕಿ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರು ಭಾನುವಾರ ಭೋಪಾಲ್‌ನಲ್ಲಿ ಮದ್ಯದ ಅಂಗಡಿಯೊಂದನ್ನು ಧ್ವಂಸಗೊಳಿಸುವ ಮೂಲಕ ಜಿಲ್ಲಾಡಳಿತಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಬರ್ಖೇರಾ ಪಠಾನಿ ಪ್ರದೇಶದಲ್ಲಿ ಇರುವ ಮದ್ಯದಂಗಡಿಗೆ ಕಲ್ಲು ತೂರಾಟ ನಡೆಸಿದ ಅವರು ಅಂಗಡಿಗೆ ನುಗ್ಗಿ ದಾಸ್ತಾನು ನಾಶಮಾಡಲು ಆರಂಭಿಸಿದರು. ಅವರ ಕಾರ್ಯಗಳನ್ನು ಶ್ಲಾಘಿಸಿದ ಸ್ಥಳೀಯರು ಅವರಿಗೆ ಸಾಥ್ ನೀಡಿದರು.
ಮದ್ಯ ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಉಮಾ ಭಾರತಿ, ಒಂದು ವಾರದೊಳಗೆ ಮದ್ಯದ ಅಂಗಡಿ ಮುಚ್ಚುವಂತೆ ಸ್ಥಳೀಯ ಆಡಳಿತಕ್ಕೆ ಎಚ್ಚರಿಕೆ ನೀಡಿದರು. ಇಲ್ಲದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಉಮಾ ಭಾರತಿ ಮದ್ಯ ನಿಷೇಧಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಿ ಮಧ್ಯಪ್ರದೇಶವನ್ನು ಮದ್ಯ ಮುಕ್ತ ರಾಜ್ಯವನ್ನಾಗಿ ಮಾಡಲು ಒತ್ತಾಯಿಸಿದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ.
ಇತ್ತೀಚೆಗಷ್ಟೇ ಅಬಕಾರಿ ನೀತಿ ಜಾರಿಗೆ ಮುಂದಾಗಿದ್ದ ಸರ್ಕಾರ:ಇಂದೋರ್ ಮತ್ತು ಭೋಪಾಲ್ ವಿಮಾನ ನಿಲ್ದಾಣಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಹೊಸ ಮದ್ಯದ ನೀತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಅಲ್ಲದೇ, ದೇಶಿಯ ಮತ್ತು ವಿದೇಶಿ ಮದ್ಯಗಳ ಬೆಲೆಯನ್ನು ಶೇ.20 ರಷ್ಟು ಕಡಿತಗೊಳಿಸುವುದಾಗಿ ತಿಳಿಸಿದೆ. ಇತ್ತೀಚೆಗಷ್ಟೇ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೊಸ ಅಬಕಾರಿ ನೀತಿ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಘಟನೆಯು ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಪ್ರತಿಪಕ್ಷ ಕಾಂಗ್ರೆಸ್‌ಗೆ ಅವಕಾಶ ನೀಡಿತು. ಭಾರತಿ ಅವರನ್ನು 'ಕಾಯುತ್ತಿರುವ ಸಿಎಂ' ಎಂದು ಕರೆದ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ' ಉಮಾ ಭಾರತಿ ಅವರು ಹೇಗೆ ಸಿಎಂ ಕುರ್ಚಿಯ ಮೇಲೆ ಮರಳಲು ಬಯಸುತ್ತಾರೆ ಎಂಬುದನ್ನು ಇದು ತೋರಿಸಿದೆ. ಆದರೆ, ಅವರು ಮದ್ಯದ ಅಂಗಡಿಗಳನ್ನು ಧ್ವಂಸ ಮಾಡುವ ಬದಲು ಅಬಕಾರಿ ನೀತಿಗಳನ್ನು ಮಾಡಿದ ಕಚೇರಿಯ ಮೇಲೆ ಕಲ್ಲು ತೂರಬೇಕಿತ್ತು ಎಂದಿದ್ದಾರೆ'.
ಇದನ್ನೂ ಓದಿ:ರಾಜೀನಾಮೆಗೆ ಮೂವರು ಸಿದ್ಧ ಎಂದಿದ್ದ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ: ಆದರೆ...