ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರವ ವಿರುದ್ಧ ಸ್ವಪಕ್ಷದ ನಾಯಕಿ ಉಮಾಭಾರತಿ ತಿರುಗಿಬಿದ್ದಿದ್ದಾರೆ. ಮಧ್ಯಪ್ರದೇಶದಲ್ಲಿನ ಮದ್ಯ ನೀತಿಯ ಬಗ್ಗೆ ಮಧ್ಯಪ್ರವೇಶಿಸುವಂತೆ ಕೋರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಉಮಾ ಭಾರತಿ ಪತ್ರ ಬರೆದಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಆಗಿರುವ ಉಮಾಭಾರತಿ, ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರವು ಜಾರಿಗೆ ತಂದಿರುವ ಮದ್ಯ ನೀತಿಯ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಈ ನೀತಿಯನ್ನು ಕೆಲವು ತಿಂಗಳಿಂದ ನಾನು ವಿರೋಧಿಸುತ್ತಿದ್ದೇನೆ. ಆದರೆ, ಈಗ ನಾನು ಉಸಿರುಗಟ್ಟುವಿಕೆ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದೇನೆ ಎಂದು ಹೇಳಿ ಮೂರು ಪುಟಗಳ ಪತ್ರವನ್ನು ಬರೆದಿದ್ದಾರೆ.
ನೀವು (ಶಿವರಾಜ್) ನನ್ನನ್ನು ತುಂಬಾ ಗೌರವಿಸುತ್ತೀರಿ ಮತ್ತು ನಾನು ಪಕ್ಷದ ನಿಯಮಗಳಿಗೆ ವಿರುದ್ಧವಾಗಿ ಹೋಗುವುದಿಲ್ಲ ಎಂದು ನಿಮಗೂ ಚೆನ್ನಾಗಿ ತಿಳಿದಿದೆ. ಆದರೆ, ನಾನು ನನ್ನ ನಂಬಿಕೆಗೆ ಸಂಬಂಧಿಸಿದ ಕೆಲ ವಿಷಯಗಳೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಉಮಾಭಾರತಿ ಖಡಕ್ ಆಗಿಯೇ ಪತ್ರದಲ್ಲಿ ಹೇಳಿದ್ದಾರೆ.
ಸಿಎಂ ಶಿವರಾಜ್ ಅವರೊಂದಿಗೆ ಮದ್ಯ ನೀತಿಯ ವಿಷಯದ ಬಗ್ಗೆ ಚರ್ಚೆ ನಡೆಸಿದಾಗಲೆಲ್ಲಾ ಯಾವಾಗಲೂ ಅದರ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದ್ದೆ. ಏಕೆಂದರೆ, ಮಾತುಕತೆಯಿಂದ ಸಕಾರಾತ್ಮಕ ಫಲಿತಾಂಶವು ಹೊರಬರುತ್ತದೆ ನಾನು ನಂಬಿದ್ದೆ. ಆದರೆ, ಇದೇ ನನ್ನನ್ನು ಅಪಹಾಸ್ಯ ಮತ್ತು ಟೀಕೆಗೆ ಒಳಪಡಿಸುವಂತೆ ಮಾಡಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧದ ಬೇಡಿಕೆ ನನ್ನ ವೈಯಕ್ತಿಕ ದುರಹಂಕಾರವಲ್ಲ. ಆದರೆ, ಇದು ಮಹಿಳೆಯರ ಗೌರವ, ಕುಟುಂಬಗಳ ಸುರಕ್ಷತೆ, ಯುವಕರ ಜೀವನೋಪಾಯ ಮತ್ತು ಸಾಮಾಜಿಕ ಸಾಮರಸ್ಯದೊಂದಿಗೆ ನೇರವಾಗಿ ಸಂಪರ್ಕ ಹೊಂದಿದೆ ಎಂದು ತಿಳಿಸಿದ್ದಾರೆ. ಅಲ್ಲದೇ, ಈ ಮದ್ಯ ಮಾರಾಟ ನಿಷೇಧದ ವಿಷಯದ ಬಗ್ಗೆ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿ ಮತ್ತು ಬಿಜೆಪಿ ಆಡಳಿತವಿರುವ ಎಲ್ಲ ರಾಜ್ಯಗಳಿಗೆ ಏಕೀಕೃತ ಮದ್ಯ ನೀತಿಯನ್ನು ರೂಪಿಸುವಂತೆ ನಡ್ಡಾ ಅವರಿಗೆ ಬಿಜೆಪಿ ನಾಯಕಿ ಮನವಿ ಮಾಡಿದ್ದಾರೆ.
ಈ ಹಿಂದೆ, ಮದ್ಯದಂಗಡಿಗೆ ಕಲ್ಲು ಎಸೆಯುವ ಮೂಲಕ, ಮದ್ಯದಂಗಡಿಗಳ ಮುಂದೆ ಪ್ರತಿಭಟನೆಗೆ ಕುಳಿತುಕೊಳ್ಳುವ ಮೂಲಕ ಮುಖ್ಯಮಂತ್ರಿ ಚೌಹಾಣ್ ಸೇರಿದಂತೆ ಬಿಜೆಪಿಯ ಉನ್ನತ ನಾಯಕತ್ವದ ವಿರುದ್ಧ ಉಮಾಭಾರತಿ ಅಸಮಾಧಾನ ಹಾಕಿದ್ದರು. ಆದರೆ, ಮೊದಲ ಬಾರಿಗೆ ಈ ವಿಷಯವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಬಹಿರಂಗ ಪತ್ರ ಬರೆಯುವ ಮೂಲಕ ಸಾರ್ವಜನಿಕ ಚರ್ಚೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ:ಭಾರಿ ಮಳೆಯಲ್ಲೇ ರಸ್ತೆಗೆ ಡಾಂಬರೀಕರಣ: ಮೂವರು ಪಿಡಬ್ಲ್ಯೂಡಿ ಇಂಜಿನಿಯರ್ಗಳು ಸಸ್ಪೆಂಡ್