ನವದೆಹಲಿ:ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಈ ಬಿಕ್ಕಟ್ಟಿನ ಮಧ್ಯೆ ರಷ್ಯಾದೊಂದಿಗೆ ಮಾತುಕತೆ ಸಕ್ರಿಯಗೊಳಿಸುವಂತೆ ಭಾರತಕ್ಕೆ ಉಕ್ರೇನ್ ರಾಯಭಾರಿಯಾಗಿರುವ ಡಾ. ಇಗೊರ್ ಪೊಲಿಖಾ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಒತ್ತಾಯಿಸಿದ್ದಾರೆ.
ಭಾರತವು ರಷ್ಯಾದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ದೆಹಲಿ ಹೆಚ್ಚು ಸಕ್ರಿಯ ಪಾತ್ರ ವಹಿಸುತ್ತದೆ ಎಂದು ಇಗೊರ್ ಪೊಲಿಖಾ ಹೇಳಿದ್ದಾರೆ. ಬಿಕ್ಕಟ್ಟಿನತ್ತ ಹೆಜ್ಜೆ ಹಾಕುವಂತೆ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ ಅವರು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ನಮ್ಮ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ತಕ್ಷಣವೇ ಸಂಪರ್ಕಿಸಲು ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಈ ದಾಳಿಯು ಒಂದು ಘೋರ ಆಕ್ರಮಣ. ಮೋದಿ ಜೀ ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ಗೌರವಾನ್ವಿತ ನಾಯಕರಲ್ಲಿ ಒಬ್ಬರು. ನಿಮಗೆ ವಿಶೇಷ ಸವಲತ್ತು ಮತ್ತು ರಷ್ಯಾದೊಂದಿಗೆ ಕಾರ್ಯತಂತ್ರದ ಸಂಬಂಧವಿದೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾವು ಭಾರತ ಸರ್ಕಾರದಿಂದ ಹೆಚ್ಚು ಅನುಕೂಲಕರವಾದ ಮನೋಭಾವವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಇಗೊರ್ ಪೊಲಿಖಾ ತಿಳಿಸಿದ್ದಾರೆ.
ಇದನ್ನೂ ಓದಿ: ಇತಿಹಾಸದಲ್ಲಿ ಕಂಡರಿಯದ ಪರಿಣಾಮ ಎದುರಿಸಬೇಕಾಗುತ್ತದೆ: ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪುಟಿನ್ ಎಚ್ಚರಿಕೆ
ಭಾರತೀಯ ಪ್ರಜೆಗಳಿಗೆ ರಾಯಭಾರ ಕಚೇರಿ ಸಲಹೆ:ಉಕ್ರೇನ್ ರಾಜಧಾನಿ ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೊರಡಿಸಿದ ಇತ್ತೀಚಿನ ಸಲಹೆಯಲ್ಲಿ, ಭಾರತೀಯ ಪ್ರಜೆಗಳು ಎಲ್ಲಿದ್ದರೂ ಶಾಂತವಾಗಿರಲು ಮತ್ತು ಸುರಕ್ಷಿತವಾಗಿರಲು ಕೇಳಿಕೊಳ್ಳಲಾಗಿದೆ. ಅದು ನಿಮ್ಮ ಮನೆಗಳು, ವಸತಿಗಳು, ಹಾಸ್ಟೆಲ್‌ಗಳು, ಸಾರಿಗೆ ಎಲ್ಲಿಯೇ ಇರಲಿ ಅಲ್ಲಿಯೇ ಸುರಕ್ಷಿತರಾಗಿರುವಂತೆ ಹಾಗೂ ಕೈವ್‌ಗೆ ಪ್ರಯಾಣಿಸುವ ಎಲ್ಲರೂ ತಮ್ಮ ತಮ್ಮ ನಗರಗಳಿಗೆ, ವಿಶೇಷವಾಗಿ ಪಶ್ಚಿಮ ದೇಶಗಳ ಗಡಿಭಾಗಗಳಲ್ಲಿ ಸುರಕ್ಷಿತ ಸ್ಥಳಗಳ ಕಡೆಗೆ ತಾತ್ಕಾಲಿಕವಾಗಿ ಹಿಂತಿರುಗಲು ಸೂಚಿಸಲಾಗಿದೆ.