ನವದೆಹಲಿ:ಉಕ್ರೇನ್‌ನಲ್ಲಿನ ಪ್ರಸ್ತುತ ಬಿಕ್ಕಟ್ಟು ರಷ್ಯಾ-ಭಾರತ ಸಂಬಂಧವೂ ಸೇರಿದಂತೆ ಇಡೀ ಜಗತ್ತಿನ ಮೇಲೆ ಪರಿಣಾಮಗಳನ್ನು ಉಂಟುಮಾಡುತ್ತದೆ. ಅದು ಉಂಟುಮಾಡುವ ಪರಿಣಾಮಗಳನ್ನು ಈಗಲೇ ಊಹಿಸಲು ಸಾಧ್ಯವಿಲ್ಲ ಎಂದು ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಶನಿವಾರ ಹೇಳಿದ್ದಾರೆ.
ಈ ಕುರಿತು ವಿಡಿಯೋ ಟ್ವೀಟ್ ಮಾಡಿರುವ ಅವರು ಯೂರೋಪಿಯನ್ ರಾಷ್ಟ್ರಗಳು ಈಗಾಗಲೇ ರಷ್ಯಾದೊಂದಿಗಿನ ಆರ್ಥಿಕ ಸಂಬಂಧವನ್ನು ಕಡಿದುಕೊಳ್ಳುತ್ತಿವೆ. ರಷ್ಯಾದೊಂದಿಗಿನ ಆರ್ಥಿಕ ಸಂಬಂಧವನ್ನು ಹೆಚ್ಚಿಸಲು ಭಾರತಕ್ಕಿದು ಒಳ್ಳೆಯ ಅವಕಾಶ ಎಂದು ಅವರು ತಿಳಿಸಿದರು.
ರಷ್ಯಾ ಮತ್ತು ಭಾರತದ ಸಂಬಂಧಗಳು ಉಭಯ ದೇಶಗಳ ಅಭಿವೃದ್ಧಿ ಹಿತಾಸಕ್ತಿಯನ್ನು ಹೊಂದಿವೆ. ಭಾರತ ಮತ್ತು ರಷ್ಯಾದ ಸಂಬಂಧವನ್ನು ತುಂಬಾ ಹತ್ತಿರದಿಂದ ನೋಡಬೇಕಿದೆ. ಯೂರೋಪಿಯನ್ ರಾಷ್ಟ್ರಗಳ ನಿರ್ಬಂಧದ ಹಿನ್ನೆಲೆಯಲ್ಲಿ ಭಾರತ ಮತ್ತು ರಷ್ಯಾದ ಕರೆನ್ಸಿಗಳ ವ್ಯವಹಾರ ಹೆಚ್ಚಾಗಬಹುದು ಎಂದು ಭವಿಷ್ಯ ನುಡಿದರು.
ಭಾರತದ ವಿದೇಶಾಂಗ ನೀತಿಗೆ ಶ್ಲಾಘನೆ:ಉಕ್ರೇನ್ ವಿಚಾರವಾಗಿ ಸ್ವತಂತ್ರ ನಿರ್ಧಾರವನ್ನು ತೆಗೆದುಕೊಂಡ ಭಾರತದ ವಿದೇಶಾಂಗ ನೀತಿಯನ್ನು ನಾವು ಸ್ವಾಗತಿಸುತ್ತೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿದೇಶಾಂಗ ನೀತಿಯ ಪಾತ್ರ ಮತ್ತು ಪ್ರಭಾವವನ್ನು ಬಲಪಡಿಸುತ್ತೇವೆ. ನಾವು ಭಾರತದ ಮೇಲೆ ಎಂದಿಗೂ ಯಾವುದೇ ಒತ್ತಡವನ್ನು ಹಾಕುವುದಿಲ್ಲ ಮತ್ತು ಯಾವುದೇ ಷರತ್ತುಗಳನ್ನು ಹಾಕುವುದಿಲ್ಲ. ಆದರೆ ಭಾರತೀಯರು ಈಗ ಅಮೆರಿಕದಲ್ಲಿ ತೀವ್ರ ಒತ್ತಡದಲ್ಲಿದ್ದಾರೆ ಎಂದಿದ್ದಾರೆ.
ಭಾರತೀಯರ ಸ್ಥಳಾಂತರಕ್ಕೆ ಪ್ರಯತ್ನ:ಉಕ್ರೇನ್‌ನ ಸಂಘರ್ಷ ವಲಯಗಳಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ ಕುರಿತು ಮಾತನಾಡಿದ ಅಲಿಪೋವ್, ತಮ್ಮ ಸರ್ಕಾರವು ಪೂರ್ವ ಉಕ್ರೇನ್ ನಗರಗಳಾದ ಖಾರ್ಕಿವ್, ಸುಮಿ ಮತ್ತು ಪಿಸೊಚಿನ್‌ನಿಂದ ವಿದ್ಯಾರ್ಥಿಗಳನ್ನು ಹೊರಗೆ ಕರೆದೊಯ್ಯಲು ಪ್ರಯತ್ನಿಸುತ್ತಿದೆ. ಭಾರತದ ಸುಮಾರು 3,000 ಖಾರ್ಕಿವ್, 900 ಮಂದಿ ಪಿಸೋಚಿನ್ ಮತ್ತು 670 ಮಂದಿ ಸುಮಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.