ನವದೆಹಲಿ:ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರುವ ಭೀತಿ ಹೆಚ್ಚಾಗಿದ್ದು ಭಾರತ ತನ್ನ ನಾಗರಿಕರು ಮತ್ತು ವಿದ್ಯಾರ್ಥಿಗಳು ದೇಶ ತೊರೆಯಲು ತಿಳಿಸಿದೆ.
ಉಕ್ರೇನ್ನಲ್ಲಿ ಅನಿಶ್ಚಿತತೆಯ ವಾತಾವರಣ ತಲೆದೋರಿದ ಹಿನ್ನೆಲೆಯಲ್ಲಿ ಭಾರತದ ನಾಗರಿಕರು ಮತ್ತು ವಿಶೇಷವಾಗಿ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ದೇಶ ತೊರೆಯುವಂತೆ ಮನವಿ ಮಾಡಿದೆ. ಅಲ್ಲದೇ, ಅನಿವಾರ್ಯವಲ್ಲದೇ ಇದ್ದಲ್ಲಿ ಉಕ್ರೇನ್ಗೆ ಯಾರೂ ಪ್ರಯಾಣ ಬೆಳೆಸದಂತೆಯೂ ತಿಳಿಸಿದೆ. ಇದರ ಜೊತೆಗೆ, ಉಕ್ರೇನ್ನಲ್ಲಿರುವ ಭಾರತದ ರಾಯಭಾರಿ ಕಚೇರಿ ಕೂಡ ದೇಶಕ್ಕೆ ಯಾರೂ ಪ್ರಯಾಣ ಬೆಳೆಸದಿರಲು ಕೋರಿದೆ.
ಉಕ್ರೇನ್ನಿಂದ ಹೊರಡಲು ಇಚ್ಚಿಸಿದಲ್ಲಿ ಅಗತ್ಯ ನೆರವಿಗಾಗಿ ಭಾರತದ ರಾಯಭಾರಿ ಕಚೇರಿಯನ್ನು ಸಂಪರ್ಕಿಸಬಹುದು. ಭಾರತದ ನಾಗರಿಕರ ಸುರಕ್ಷತೆ ದೃಷ್ಟಿಯಿಂದ ತಕ್ಷಣವೇ ದೇಶ ತೊರೆಯಲು ಅಗತ್ಯ ನೆರವು ನೀಡಲಾಗುವುದು ಎಂದು ಭಾರತದ ರಾಯಭಾರಿ ಕಚೇರಿ ತಿಳಿಸಿದೆ.