ನವದೆಹಲಿ:ಹವಾಮಾನ ಬದಲಾವಣೆಯನ್ನು ಸಮರ್ಥವಾಗಿ ನಿಭಾಯಿಸಲು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಜಾಗತಿಕ ಹಸಿರು ಹವಮಾನ ನಿಧಿಗೆ 2 ಬಿಲಿಯನ್ ಡಾಲರ್ ನೀಡುವುದಾಗಿ ಇಂದು (ಭಾನುವಾರ) ಘೋಷಿಸಿದ್ದಾರೆ. COP 15ನಲ್ಲಿ ಕೋಪನ್ ಹೇಗನ್ ಒಪ್ಪಂದದ ನಂತರ 194 ದೇಶಗಳು ಸ್ಥಾಪಿಸಿದ ಗ್ರೀನ್ ಕ್ಲೈಮೇಟ್ ಫಂಡ್‌ಗೆ ಯುನೈಟೆಡ್ ಕಿಂಗ್ಡಮ್ 2 ಶತಕೋಟಿ ಡಾಲರ್ ಕೊಡುಗೆ ನೀಡಲಿದೆ ಎಂದು ಭಾರತದಲ್ಲಿರುವ ಬ್ರಿಟಿಷ್ ಹೈಕಮಿಷನ್ ಹೇಳಿದೆ.
ದೆಹಲಿಯಲ್ಲಿ ನಡೆಯುತ್ತಿರುವ 2ನೇ ಮತ್ತು ಕೊನೆಯ ದಿನದ ಶೃಂಗಸಭೆಯಲ್ಲಿ ರಿಷಿ ಸುನಕ್, ಮುಂಬರುವ COP28 ಹವಾಮಾನ ಶೃಂಗಸಭೆಯ ವೇಳೆಗೆ ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಮತ್ತು ಆರ್ಥಿಕವಾಗಿ ದುರ್ಬಲ ರಾಷ್ಟ್ರಗಳ ಸಹಾಯಕ್ಕಾಗಿ ಕ್ರಮ ಕೈಗೊಳ್ಳುವಂತೆ ಇತರೆ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.
ಯುಕೆ ಸರ್ಕಾರ ತನ್ನ ಕೊಡುಗೆಯನ್ನು ಏರಿಸಿರುವುದಾಗಿ ತಿಳಿಸಿದೆ. 2022-23ರ ಕೊಡುಗೆಗೆ ಹೋಲಿಸಿದರೆ 2024ರಿಂದ 2027ರವರೆಗೆ ಹೊಂದಿರುವ ಆರ್ಥಿಕ ಬದ್ಧತೆಯ ಕೊಡುಗೆ ಶೇ 12.7 ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಹಸಿರು ಹವಾಮಾನ ನಿಧಿ 2010ರಲ್ಲಿ ಕ್ಯಾನ್ಕುನ್ ಒಪ್ಪಂದದ ಮೂಲಕ ಪ್ರಾರಂಭವಾಯಿತು. ಹಸಿರು ಹವಾಮಾನ ನಿಧಿ ಅಥವಾ ಗ್ರೀನ್ ಕ್ಲೈಮೇಟ್ ಫಂಡ್ (GCF) ಯುನೈಟೆಡ್ ನೇಷನ್ಸ್ ಫ್ರೇಮ್ವರ್ಕ್ ಕನ್ವೆನ್ಷನ್ ಆನ್ ಕ್ಲೈಮೇಟ್ ಚೇಂಜ್ ಮತ್ತು ಪ್ಯಾರಿಸ್ ಒಪ್ಪಂದಕ್ಕೆ ಹಣಕಾಸು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳು ಹವಾಮಾನ ಬಿಕ್ಕಟ್ಟಿನ ಪರಿಣಾಮಗಳನ್ನು ಎದುರಿಸಲು ಮತ್ತು ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುವುದು ಇದರ ಪ್ರಾಥಮಿಕ ಉದ್ದೇಶ. ಇದೀಗ ಪ್ರಧಾನಿ ರಿಷಿ ಸುನಕ್ ಘೋಷಿಸಿರುವ ಹಣಕಾಸಿನ ನೆರವು ಇಂಗ್ಲೆಂಡ್ ಸರ್ಕಾರದ ಬದ್ಧತೆಯ ಭಾಗವಾಗಿದೆ.
ಇದನ್ನೂ ಓದಿ:ಜಿ-20 ಶೃಂಗದ ನಡುವೆ ಪ್ರಧಾನಿ ಮೋದಿ, ಇಂಗ್ಲೆಂಡ್ ಪ್ರಧಾನಿ ಸುನಕ್ ದ್ವಿಪಕ್ಷೀಯ ಸಭೆ; ವಿಡಿಯೋ