ನವದೆಹಲಿ: ಇತ್ತೀಚೆಗೆ ಟ್ವಿಟರ್ ಹ್ಯಾಕ್ ಪ್ರಕರಣಗಳು ಒಂದಾದ ನಂತರ ಒಂದರಂತೆ ಕಾಣಿಸಿಕೊಳ್ಳುತ್ತಿವೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಕಚೇರಿಯ ಟ್ವಿಟರ್ ಶನಿವಾರವಷ್ಟೇ ಹ್ಯಾಕ್ ಆಗಿದ್ದು, ಮಾತ್ರವಲ್ಲದೇ ಭಾರತೀಯ ಹವಾಮಾನ ಇಲಾಖೆಯ ಟ್ವಿಟರ್ ಕೂಡಾ ಹ್ಯಾಕ್ ಆಗಿತ್ತು. ಈಗ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅಧಿಕೃತ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಕಳೆದ ಎರಡು ದಿನಗಳಲ್ಲಿ ಸರ್ಕಾರದ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿದ ಮೂರನೇ ಪ್ರಕರಣ ಇದಾಗಿದೆ.
ಕೆಲವು ಅಪರಿಚಿತ ಹ್ಯಾಕರ್‌ಗಳು ಯುಜಿಸಿ ಟ್ವಿಟರ್ ಖಾತೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಪ್ರಪಂಚದಾದ್ಯಂತ ಇರುವ ಹಲವಾರು ಅಪರಿಚಿತ ವ್ಯಕ್ತಿಗಳ, ಅಪ್ರಸ್ತುತ ಟ್ವೀಟ್ಗಳನ್ನು ಟ್ಯಾಗ್ ಮಾಡಿದ್ದಾರೆ. ಇದರ ಜೊತೆಗೆ ಯುಜಿಸಿಯ ಪ್ರೊಫೈಲ್ ಪಿಕ್ಚರ್ ಅನ್ನು ಬದಲಾಯಿಸಲಾಗಿದ್ದು, ವ್ಯಂಗ್ಯಚಿತ್ರವೊಂದನ್ನು ಬಳಸಲಾಗಿದೆ. ಈಗ ಸದ್ಯಕ್ಕೆ 2 ಲಕ್ಷದ 96 ಸಾವಿರ ಫಾಲೋವರ್ಸ್ ಅನ್ನು ಯುಜಿಸಿ ಟ್ವಿಟರ್ ಖಾತೆ ಹೊಂದಿದ್ದು, ಯುಜಿಸಿಯ ಅಧಿಕೃತ ವೆಬ್ಸೈಟ್ಗೆ ಕೂಡಾ ಟ್ವಿಟರ್ನಲ್ಲಿ ಲಿಂಕ್ ಮಾಡಲಾಗಿದೆ.