ಚೆನ್ನೈ/ ಅಯೋಧ್ಯಾ :ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತಾದ ವಿವಾದಿತ ಹೇಳಿಕೆಯು ರಾಷ್ಟ್ರವ್ಯಾಪಿ ತೀವ್ರ ಟೀಕೆಗೆ ಗುರಿಯಾಗಿದೆ. ಆದಾಗ್ಯೂ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಸ್ಟಾಲಿನ್ ಮತ್ತೆ ಮತ್ತೆ ಹೇಳಲು ಹಿಂಜರಿಯುವುದಿಲ್ಲ ಎಂದು ಮೊಂಡು ವಾದ ಮಾಡಿದ್ದಾರೆ.
ಸನಾತನ ಧರ್ಮ ಡೆಂಘಿ ಮತ್ತು ಮಲೇರಿಯಾ ಇದ್ದಂತೆ. ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಸ್ಟಾಲಿನ್ ಶನಿವಾರ ಹೇಳಿಕೆ ನೀಡಿದ್ದರು. ಇದು ವಿವಾದ ಉಂಟಾಗಿ ದೇಶಾದ್ಯಂತ ಟೀಕೆಗೆ ಗುರಿಯಾಗಿದೆ.
ಇಂದು (ಸೋಮವಾರ) ತೂತುಕುಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಉದಯನಿಧಿ ಸ್ಟಾಲಿನ್, ಎರಡು ದಿನಗಳ ಹಿಂದೆ ನಾನು ಪ್ರಗತಿಪರ ಲೇಖಕರ ಸಮಾರಂಭದಲ್ಲಿ ಸನಾತನ ಧರ್ಮದ ಕುರಿತು ಹೇಳಿಕೆಯೊಂದನ್ನು ನೀಡಿದ್ದೆ. ಅದಕ್ಕೆ ವಿರೋಧ ವ್ಯಕ್ತವಾಗಿದೆ. ಆದರೆ, ನಾನು ಹೇಳಿದ್ದನ್ನು ಮತ್ತೆ ಮತ್ತೆ ಹೇಳುತ್ತೇನೆ ಎಂದಿದ್ದಾರೆ. ನಾನು ಜಾತಿ ವ್ಯವಸ್ಥೆ ವಿರುದ್ಧ ಮಾತನಾಡಿದ್ದೇನೆ. ನನ್ನ ವಿರುದ್ಧ ಮಾಡಲಾಗುತ್ತಿರುವ ಟೀಕೆ, ಕೇವಲ ಹಿಂದುಗಳ ಮೇಲಲ್ಲ, ಎಲ್ಲಾ ಧರ್ಮಗಳ ವಿರುದ್ಧ ಎಂದು ಹೇಳಿದ್ದಾರೆ.
ಸ್ಟಾಲಿನ್ ತಲೆಗೆ 10 ಕೋಟಿ ರೂ. ಬಹುಮಾನ:ಸನಾತನ ಧರ್ಮವನ್ನು ರೋಗಗಳಿಗೆ ಹೋಲಿಸಿರುವ ಡಿಎಂಕೆ ನಾಯಕ, ಸಚಿವ ಉದಯನಿಧಿ ಸ್ಟಾಲಿನ್ ಅವರ ತಲೆ ಕಡಿದರೆ 10 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಅಯೋಧ್ಯೆಯ ಸಂತ ಪರಮಹಂಸ ಆಚಾರ್ಯರು ಘೋಷಿಸಿದ್ದಾರೆ. ಅಲ್ಲದೇ, ಉದಯನಿಧಿಯ ಸಾಂಕೇತಿಕ ಶಿರಚ್ಛೇದ ನಡೆಸಿ ನಂತರ ಅವರ ಸನಾತನ ಧರ್ಮದ ಹೇಳಿಕೆಯನ್ನು ವಿರೋಧಿಸಿ ಪೋಸ್ಟರ್‌ಗೆ ಬೆಂಕಿ ಹಚ್ಚಿದ್ದಾರೆ.
ಸ್ಟಾಲಿನ್ ಅವರ ತಲೆಗೆ 10 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು. ಒಂದು ವೇಳೆ ಇದರಲ್ಲಿ ವಿಫಲವಾದರೆ, ಅವರ ತಲೆಯನ್ನು ಅವರೇ ಕತ್ತರಿಸಿಕೊಳ್ಳಿ ಎಂದೂ ಹೇಳಿದ್ದಾರೆ. ಈ ಹಿಂದೆಯೂ ಪರಮಹಂಸ ಆಚಾರ್ಯರು, ರಾಮಚರಿತಮಾನಸ ವಿರುದ್ಧದ ಹೇಳಿಕೆಗಾಗಿ ಬಿಹಾರ ಸಚಿವರ ನಾಲಿಗೆ ಕತ್ತರಿಸಿದಲ್ಲಿ 10 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಬಾಲಿವುಡ್ ನಟ ಶಾರುಖ್ ಖಾನ್ ವಿರುದ್ಧವೂ ಬೆದರಿಕೆ ಹಾಕಿದ್ದರು.
ಪಶ್ಚಿಮ ಬಂಗಾಳದಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಸಿಎಂ ಮಮತಾ ಬ್ಯಾನರ್ಜಿ ಅವರು, ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಭಾವನೆಗಳಿವೆ. ಭಾರತ ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ವಿವಿಧತೆಯಲ್ಲಿ ಏಕತೆ ನಮ್ಮ ಮೂಲವಾಗಿದೆ. ಆದ್ದರಿಂದ, ಯಾವುದೇ ಧರ್ಮದ ಬಗ್ಗೆ ಹೇಳಿಕೆ ನೀಡುವ ಮುನ್ನ ಎಚ್ಚರವಾಗಿರಬೇಕು. ನಾನು ಸನಾತನ ಧರ್ಮವನ್ನು ಗೌರವಿಸುತ್ತೇನೆ. ಯಾವುದೇ ಜಾತಿ, ಧರ್ಮವನ್ನು ಖಂಡಿಸುವ ಹೇಳಿಕೆ ನೀಡಬಾರದು ಎಂದು ಸ್ಟಾಲಿನ್ ಮಾತಿಗೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮನುಷ್ಯರಂತೆ ನಡೆಸಿಕೊಳ್ಳದ ಧರ್ಮವು ಕಾಯಿಲೆಯಷ್ಟೇ ಮಾರಕ- ಖರ್ಗೆ: ಪ್ರತಿ ಧರ್ಮಕ್ಕೂ ಪ್ರತ್ಯೇಕ ಭಾವನೆಗಳಿವೆ ಎಂದ ಮಮತಾ