ಚೆನ್ನೈ (ತಮಿಳುನಾಡು) :ಸನಾತನ ಧರ್ಮ ಕುರಿತ ವಿವಾದಿತ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿರುವ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್, ನಾನು ಹಿಂದು ಧರ್ಮ ವಿರೋಧಿ ಹೇಳಿಕೆ ನೀಡಿಲ್ಲ. ಆದರೆ ನಾನು ಸನಾತನ ಧರ್ಮದ ತಾರತಮ್ಯಗಳ ವಿರೋಧಿ. ಇದಕ್ಕೆ ಉದಾಹರಣೆ ಹೊಸ ಸಂಸತ್ ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಕರೆಯದೇ ಇರುವುದು ಎಂದು ಹೇಳಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಉದಯನಿಧಿ, ಸನಾತನ ಧರ್ಮ ತಾರತಮ್ಯ ಮಾಡುತ್ತದೆ. ಹೀಗಾಗಿ ನಾನು ಅದನ್ನು ಬೇರು ಸಮೇತ ನಿರ್ಮೂಲನೆ ಮಾಡಬೇಕು ಎಂದಿದ್ದೆ. ಅದಕ್ಕೆ ಉದಾಹರಣೆ ನೀಡಬಲ್ಲಿರಾ ಎಂಬ ಪ್ರಶ್ನೆಗೆ, ಹೊಸದಾಗಿ ನಿರ್ಮಿಸಲಾಗಿರುವ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿರಲಿಲ್ಲ. ಇದು ಸನಾತನ ಧರ್ಮದ ತಾರತಮ್ಯಕ್ಕೆ ಅತ್ಯುತ್ತಮ ಉದಾಹರಣೆ ಎಂದು ಉತ್ತರಿಸಿದರು.
ನಿಮ್ಮ ಹೇಳಿಕೆಗೆ ಕ್ಷಮೆಯಾಚಿಸುವಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉದಯನಿಧಿ ಸ್ಟಾಲಿನ್ ಉತ್ತರ ನೀಡಲು ನಿರಾಕರಿಸಿದರು. ನಾನು ಹಿಂದು ಧರ್ಮದ ವಿರೋಧಿಯಲ್ಲ. ಸನಾತನ ಸಂಸ್ಥೆಗಳು ಜಾತಿ ತಾರತಮ್ಯದಂತಹ ಆಚರಣೆಗಳನ್ನು ಒಪ್ಪಿಕೊಂಡಿವೆ. ಅದನ್ನು ನಾನು ವಿರೋಧಿಸಿದ್ದೇನೆ. ಈ ಬಗ್ಗೆ ನಾನು ಒಂದು ಸಮಾರಂಭದಲ್ಲಿ ಮಾತ್ರ ಹೇಳಿದ್ದೇನೆ. ಇನ್ನು ಅದನ್ನು ಎಲ್ಲಿ ಬೇಕಾದರೂ ಹೇಳುವೆ. ನಾನು ಆಡಿದ ಮಾತಿಗೆ ಬದ್ಧನಾಗಿದ್ದೇನೆ. ಹಿಂದು ಧರ್ಮವನ್ನು ಮಾತ್ರವಲ್ಲ, ಎಲ್ಲ ಧರ್ಮಗಳಲ್ಲಿನ ಕೆಡುಕನ್ನು ನಾನು ಟೀಕಿಸಿದ್ದೇನೆ. ಜಾತಿ, ಭೇದಗಳನ್ನು ಖಂಡಿಸಿದ್ದೇನೆ ಅಷ್ಟೇ ಎಂದು ಉದಯನಿಧಿ ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡರು.