ಕರೂರ್(ತಮಿಳುನಾಡು):ಡಿಎಂಕೆ ನಾಯಕ ಮತ್ತು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವರು ಇದೇ ಮೊದಲ ಬಾರಿಗೆ ತಾವು ಸನಾತನ ಧರ್ಮದ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಯ ಕುರಿತು ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿದರು. ಹೌದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು ತಾನು ಸನಾತನ ಧರ್ಮದ ಕುರಿತು ನೀಡಿದ ಹೇಳಿಕೆಯನ್ನು ತಿರುಚಿದ್ದು, ಇಡೀ ದೇಶವೇ ನನ್ನ ಬಗ್ಗೆ ನಕರಾತ್ಮಕವಾಗಿ ಮಾತನಾಡುವಂತೆ ಮಾಡಿತು ಎಂದು ಆರೋಪಿಸಿದ್ದಾರೆ.
ಉದಯನಿಧಿ ವಿವಾದವೇನು?:ಕಳೆದ ಸೆಪ್ಟೆಂಬರ್‌ನಲ್ಲಿ ತಮಿಳುನಾಡು ಪ್ರಗತಿಪರ ಲೇಖಕರ ವೇದಿಕೆ ಆಯೋಜಿಸಿದ್ದ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಮಾತನಾಡಿದ್ದ ಉದಯನಿಧಿ, ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಗಳಿಗೆ ಹೋಲಿಸಿ, ಇದು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧ ಎಂದು ಹೇಳಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದನ್ನು ನಿನ್ನೆ ಕರೂರ್‌ನಲ್ಲಿ ಪ್ರಸ್ತಾಪಿಸಿದ ಸ್ಟಾಲಿನ್, ಪ್ರಧಾನಿ ಮೋದಿ ಮಧ್ಯಪ್ರದೇಶದ ಚುನಾವಣಾ ಭಾಷಣದ ವೇಳೆ ನನ್ನ ಹೆಸರು ಉಲ್ಲೇಖಿಸಿ ಮಾತನಾಡಿದ್ದಾರೆ. ಅಲ್ಲದೇ ನಾನು ನರಮೇಧಕ್ಕೆ ಕರೆ ನೀಡಿದ್ದೇನೆ ಎಂದು ಹೇಳಿದ್ದಾರೆ. ನಾನು ಹೇಳದ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ದೂರಿದರು.
ಸ್ಪಷ್ಟನೆ ನೀಡಿದ ಉದಯನಿಧಿ ಸ್ಟಾಲಿನ್:"ನಾನು ಚೆನ್ನೈನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ್ದೆ. ಕೇವಲ ಮೂರು ನಿಮಿಷ ಮಾತ್ರ ಮಾತನಾಡಿದ್ದೆ. ಆ ವೇಳೆ ನಾನು, ಎಲ್ಲರನ್ನೂ ಸಮಾನವಾಗಿ ಕಾಣಬೇಕು. ತಾರತಮ್ಯ ಮಾಡಬಾರದು. ತಾರತಮ್ಯಗಳಂತಹ ಪ್ರಯತ್ನಗಳನ್ನು ನಿರ್ಮೂಲನೆ ಮಾಡಬೇಕು ಎಂದಿದ್ದೆ. ಆದರೆ ಬಿಜೆಪಿಯವರು ನನ್ನ ಹೇಳಿಕೆಯನ್ನು ತಿರುಚಿ, ಸಣ್ಣ ವಿಚಾರವನ್ನು ದೊಡ್ಡದು ಮಾಡಿ ಇಡೀ ದೇಶವೇ ನನ್ನ ವಿರುದ್ಧ ಮಾತನಾಡುವಂತೆ ಮಾಡಿದರು" ಎಂದರು.