ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಪುತ್ರ, ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಗುರುವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ತಮಿಳುನಾಡಿನ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗಾಗಿ ಕೇಂದ್ರದಿಂದ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಪ್ರಧಾನಿಗೆ ಉದಯನಿಧಿ ಮನವಿ ಮಾಡಿದ್ದಾರೆ.
ಡಿಎಂಕೆ ನಾಯಕರಾದ ಉದಯನಿಧಿ ಸನಾತನ ಧರ್ಮದ ವಿರುದ್ಧ ನೀಡಿದ್ದ ಹೇಳಿಕೆಯು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಅಲ್ಲದೇ, ಬಿಜೆಪಿ ಸ್ಟಾಲಿನ್ ಪುತ್ರನ ಮೇಲೆ ಮುಗಿಬಿದ್ದಿತ್ತು. ಇದಾದ ನಂತರ ಮೊದಲ ಬಾರಿಗೆ ಮೋದಿ ಅವರನ್ನು ಉದಯನಿಧಿ ಭೇಟಿಯಾಗಿದ್ದಾರೆ. ಅಲ್ಲದೇ, ಇತ್ತೀಚಿನ ಎರಡು ದಿನಗಳ ದಕ್ಷಿಣ ಭಾರತದ ಪ್ರವಾಸದ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತಮಿಳುನಾಡು ಸಿಎಂ, ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಅವರೊಂದಿಗೆ ಮೋದಿ ವೇದಿಕೆ ಹಂಚಿಕೊಂಡಿದ್ದರು. ಆಗಲೂ ಸಿಎಂ ಸ್ಟಾಲಿನ್ ತಮಿಳುನಾಡು ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಹೆಚ್ಚಿನ ಅನುದಾನ ಬಿಡುವಂತೆಗೆ ಪ್ರಧಾನಿಗೆ ಒತ್ತಾಯಿಸಿದ್ದರು.
ಖೇಲೋ ಇಂಡಿಯಾಗೆ ಪ್ರಧಾನಿ ಮೋದಿಗೆ ಆಹ್ವಾನ:ಚೆನ್ನೈನಲ್ಲಿ ಜನವರಿ 19ರಿಂದ 'ಖೇಲೋ ಇಂಡಿಯಾ ಯೂತ್ ಗೇಮ್ಸ್' ಆಯೋಜಿಸಲಾಗಿದೆ. ಇದರ ಉದ್ಘಾಟನಾ ಸಮಾರಂಭಕ್ಕೂ ಪ್ರಧಾನಿ ಮೋದಿ ಅವರನ್ನು ತಮಿಳುನಾಡು ಸಚಿವ ಉದಯನಿಧಿ ಆಹ್ವಾನಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಉದಯನಿಧಿ ಮಾಹಿತಿ ಹಂಚಿಕೊಂಡಿದ್ದಾರೆ.
''2024ರ ಜನವರಿ 19ರಂದು ಚೆನ್ನೈನಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಆಹ್ವಾನಿಸಿದ್ದಕ್ಕೆ ಸಂತೋಷವಾಗಿದೆ'' ಎಂದು ಉದಯನಿಧಿ ಸ್ಟಾಲಿನ್ ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.