ಮುಂಬೈ/ಗುವಾಹಟಿ: ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಹಾಲಿ ಮುಖ್ಯಮಂತ್ರಿ ಆಗಿದ್ದಾರೆ, ಅವರು ಮುಖ್ಯಮಂತ್ರಿ ಆಗಿಯೇ ಉಳಿಯುತ್ತಾರೆ ಎಂದು ಪಕ್ಷದ ಹಿರಿಯ ಮುಖಂಡ ಸಂಜಯ್ ರಾವತ್ ಹೇಳಿದರು.
ಮಹಾರಾಷ್ಟ್ರದಲ್ಲಿ ಬುಧವಾರದ ರಾಜಕೀಯ ಬೆಳವಣಿಗೆಗಳ ನಂತರ ಮತ್ತು ಉದ್ಧವ್ ಠಾಕ್ರೆ ಸಿಎಂ ಅಧಿಕೃತ ನಿವಾಸ ತೊರೆಯುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಧವ್ ಠಾಕ್ರೆ ಸಿಎಂ ಆಗಿ ಮುಂದುವರೆಯಲಿದ್ದಾರೆ. ಒಂದು ವೇಳೆ ನಮಗೆ ಅವಕಾಶ ಸಿಕ್ಕರೆ, ಸದನದಲ್ಲಿ ನಮ್ಮ ಬಹುಮತವನ್ನೂ ಸಾಬೀತುಪಡಿಸುತ್ತೇವೆ ಎಂದರು.
ಇದಕ್ಕೂ ಮುನ್ನ ಸಂಜೆ ಪಾಲುದಾರ ಪಕ್ಷವಾದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ ಹಾಗೂ ಜಿತೇಂದ್ರ ಅವ್ಹಾದ್ ಉದ್ಧವ್ ಠಾಕ್ರೆ ನಿವಾಸಕ್ಕೆ ಭೇಟಿ ನೀಡಿದರು. ಸುಮಾರು ಒಂದು ಗಂಟೆ ಕಾಲ ಉದ್ಧವ್ ಮತ್ತು ಪವಾರ್ ಮಾತುಕತೆ ನಡೆಸಿದರು. ಸಭೆ ನಂತರ ಹೊರಬಂದ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ 'ಥಂಬ್ಸ್ ಅಪ್' ಪ್ರದರ್ಶಿಸಿದರು. ಅಲ್ಲದೇ, ಸಿಎಂ ಉದ್ಧವ್ ಠಾಕ್ರೆ ಕೂಡ ತಮ್ಮ ಬೆಂಬಲಿಗರನ್ನು ಸ್ವಾಗತಿಸಲು ಹೊರಬಂದರು.