ಮುಂಬೈ(ಮಹಾರಾಷ್ಟ್ರ):ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಇದೇ ಮೊದಲ ಬಾರಿಗೆ ಉದ್ಧವ್ ಠಾಕ್ರೆ ಫೇಸ್ಬುಕ್ ಲೈವ್ ಮೂಲಕ ಮತ್ತೊಮ್ಮೆ ಮಾತನಾಡಿದರು. "ಈ ಕೆಲಸವನ್ನು ಅಮಿತ್ ಶಾ ಈ ಹಿಂದೆ ಗೌರವಯುತವಾಗಿ ಮಾಡಬಹುದಿತ್ತು. ಹಾಗೆ ಮಾಡಿದ್ದರೆ ಶಿವಸೇನೆ ಅಧಿಕೃತವಾಗಿ ನಿಮ್ಮೊಂದಿಗಿರುತ್ತಿತ್ತು" ಎಂದರು.
"ಈ ಹಿಂದೆ ಅಮಿತ್ ಶಾ ಅವರಿಗೆ ನಾನು ಇದೇ ಮಾತು ಹೇಳಿದ್ದೆ. 2.5 ವರ್ಷಗಳ ಕಾಲ ಶಿವಸೇನೆ ಸಿಎಂ ಆಗಿರಬೇಕು ಎಂದಿದ್ದೆ. ಅವರು ಇದನ್ನು ಮೊದಲೇ ಮಾಡಿದ್ದರೆ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ಇದೀಗ ಮುಖ್ಯಮಂತ್ರಿಯಾಗಿರುವ ಏಕನಾಥ್ ಶಿಂಧೆ ಶಿವಸೇನೆಯ ಅಭ್ಯರ್ಥಿ ಅಲ್ಲ" ಎಂದು ಹೇಳಿದರು.
"ನಾನು ರಾಜೀನಾಮೆ ನೀಡಿದ ಬಳಿಕ ನನಗೆ ಜನರಿಂದ ಅಪಾರ ಪ್ರೀತಿಪೂರ್ವಕ ಸಂದೇಶಗಳು ಬಂದಿವೆ. ದಿಢೀರ್ ಆಗಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ವ್ಯಕ್ತಿ ರಾಜೀನಾಮೆ ನೀಡಿದಾಗ ತುಂಬಾ ಪ್ರೀತಿ ಮತ್ತು ಗೌರವ ಸಿಕ್ಕಿರುವುದು ಸಂತೋಷ ಮೂಡಿಸಿದೆ. ಯಾವುದೇ ಕಾರಣಕ್ಕೂ ನನ್ನ ಮೇಲಿನ ಕೋಪವನ್ನು ಜನರ ಮೇಲೆ ತೋರಿಸಬೇಡಿ. ಮೆಟ್ರೋ ಕಾರ್ ಶೆಡ್ನ ಪ್ರಸ್ತಾಪ ಬದಲಾಯಿಸಬೇಡಿ" ಎಂದು ಇದೇ ವೇಳೆ ಶಿಂಧೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ ಶಿಂಧೆ ಅಧಿಕಾರ ಸ್ವೀಕಾರ ಮಾಡ್ತಿದ್ದಂತೆ ಮೆಟ್ರೋ ಕಾರ್ಶೆಡ್ ಯೋಜನೆ ಬದಲಾಯಿಸಲು ಮುಂದಾಗಿದ್ದಾರೆ.