ಮುಂಬೈ (ಮಹಾರಾಷ್ಟ್ರ): ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ , ತಮ್ಮ ವಿರುದ್ಧ ಬಂಡಾಯ ಎದ್ದು ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ಏಕನಾಥ್ ಶಿಂಧೆ ಅವರನ್ನು ಶುಕ್ರವಾರ ಶಿವಸೇನಾ ನಾಯಕನ ಸ್ಥಾನದಿಂದ ವಜಾಗೊಳಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಶಿಂಧೆ ಅವರನ್ನು ವಜಾ ಮಾಡಲಾಗಿದೆ ಎಂದು ಶಿವಸೇನೆ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಬಂಡಾಯದಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಶಿಂಧೆ ಅವರು ಬೆಂಬಲಿತ ಶಾಸಕರೊಂದಿಗೆ ಗುವಾಹಟಿಯಲ್ಲಿ ತಂಗಿದ್ದರು. ನಂತರ ಉದ್ಧವ್ ಠಾಕ್ರೆ ಬುಧವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದೀಗ ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿ ಸ್ಥಾನವನ್ನು ಬಂಡಾಯವೆದ್ದ ಏಕನಾಥ್ ಶಿಂಧೆ ಅಲಂಕರಿಸಿದ್ದಾರೆ. ಏಕನಾಥ್ ಶಿಂಧೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದಕ್ಕಾಗಿ ಶುಕ್ರವಾರ ಬಿಜೆಪಿ ವಿರುದ್ಧ ಠಾಕ್ರೆ ತೀವ್ರ ವಾಗ್ದಾಳಿ ನಡೆಸಿದ್ದರು.
ರಾಜ್ಯದಲ್ಲಿ 2019ರ ವಿಧಾನಸಭಾ ಚುನಾವಣೆಯ ನಂತರ ಶಿವಸೇನೆ ಮತ್ತು ಬಿಜೆಪಿ ಪಕ್ಷಗ ಬೇರ್ಪಟ್ಟಿತು. ಹಿಂದಿನವರು ಐದು ವರ್ಷಗಳ ಅವಧಿಯಲ್ಲಿ ಎರಡೂ ಪಕ್ಷಗಳಿಗೆ ತಲಾ 2.5 ವರ್ಷಗಳ ಮುಖ್ಯಮಂತ್ರಿ ಸ್ಥಾನವನ್ನು ನೀಡುವ ವಿಚಾರವನ್ನು ಒಪ್ಪದ ಹಿನ್ನೆಲೆ ಬೇರ್ಪಡಬೇಕಾಯಿತು. ನಂತರ ಸರ್ಕಾರ ರಚಿಸಲು ಪ್ರತಿಸ್ಪರ್ಧಿ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು.