ನವದೆಹಲಿ:ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟಕ್ಕೆ ಸುಪ್ರೀಂಕೋರ್ಟ್ನಲ್ಲಿ ಮತ್ತೊಮ್ಮೆ ಹಿನ್ನೆಡೆಯಾಗಿದ್ದು, ರಾಜ್ಯಪಾಲರ ಸೂಚನೆಯಂತೆ ನಾಳೆ ವಿಶ್ವಾಸಮತಯಾಚನೆ ಮಾಡಲು ಸೂಚನೆ ನೀಡಿದೆ. ಹೀಗಾಗಿ, ಬೆಳಗ್ಗೆ 11 ಗಂಟೆಗೆ ವಿಶ್ವಾಸಮತ ಯಾಚನೆ ನಡೆಯಲಿದೆ.
ಆಡಳಿತಾರೂಢ ಮಹಾರಾಷ್ಟ್ರ ಮೈತ್ರಿ ಸರ್ಕಾರಕ್ಕೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿದ್ದರು. ರಾಜ್ಯಪಾಲರ ಆದೇಶ ಪ್ರಶ್ನೆ ಮಾಡಿದ್ದ ಎಂವಿಎ(ಮಹಾವಿಕಾಸ್ ಅಘಾಡಿ) ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಅದರ ವಾದ-ಪ್ರತಿವಾದ ಆಲಿಸಿದ್ದ ಸುಪ್ರೀಂಕೋರ್ಟ್ ರಾತ್ರಿ 9 ಗಂಟೆಗೆ ತೀರ್ಪು ಕಾಯ್ದಿರಿಸಿತ್ತು.
ಇದನ್ನೂ ಓದಿರಿ:'ಸುಪ್ರೀಂಕೋರ್ಟ್ ತೀರ್ಪು ನಮ್ಮ ವಿರುದ್ಧವಾದರೆ ರಾಜೀನಾಮೆ ನೀಡುವೆ': ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡನೆ ಮಾಡಿದ್ದರು. ನಾಳೆ ಬಹುಮತ ಸಾಬೀತು ನಡೆಯದಿದ್ದರೆ ಸ್ವರ್ಗವೇನೂ ಕುಸಿದು ಬೀಳುವುದಿಲ್ಲ ಎಂದು ತಿಳಿಸಿದ್ದರು. ಶಿಂಧೆ ಬಣದ ಪರ ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ವಾದ ಮಾಡಿದ್ದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ರಾಜ್ಯಪಾಲರ ಸೂಚನೆಯಂತೆ ನಾಳೆ ಬೆಳಗ್ಗೆ 11 ಗಂಟೆಗೆ ವಿಶ್ವಾಸಮತಯಾಚನೆ ಮಾಡಲು ಸೂಚನೆ ನೀಡಿದೆ. ಇದರ ಜೊತೆಗೆ ಜೈಲಿನಲ್ಲಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹಾಗೂ ಮಾಜಿ ಸಚಿವ ಅನಿಲ್ ದೇಶ್ಮುಖ್ಗೆ ವಿಶ್ವಾಸಮತಯಾಚನೆಯಲ್ಲಿ ಭಾಗಿಯಾಗಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ಮಹಾರಾಷ್ಟ್ರ ಬಲಾಬಲ ಇಂತಿದೆ:288 ವಿಧಾನಸಭೆಯಲ್ಲಿ ಬಿಜೆಪಿ 105 ಸದಸ್ಯ ಬಲ ಹೊಂದಿದೆ. ಉಳಿದಂತೆ, ಸಮ್ಮಿಶ್ರ ಅಘಾಡಿ ಸರ್ಕಾರದಲ್ಲಿ 169 ಸದಸ್ಯರಿದ್ದಾರೆ. ಎನ್ಸಿಪಿ 53, ಕಾಂಗ್ರೆಸ್ 44 ಹಾಗೂ ಶಿವಸೇನೆಯ 56 ಶಾಸಕರಿದ್ದಾರೆ. ಇದೀಗ ಶಿವಸೇನೆಯ 48 ಹಾಗೂ ಪಕ್ಷೇತರ 9 ಶಾಸಕರು ಬಂಡಾಯವೆದ್ದ ಕಾರಣ ಮೈತ್ರಿ ಸರ್ಕಾರ ಪತನದ ಹಾದಿ ಹಿಡಿದಿದೆ.