ಉದಯಪುರ:ರಾಜಸ್ಥಾನದ ಉದಯಪುರದಲ್ಲಿ ದರ್ಜಿಯ ಶಿರಚ್ಛೇದ ಮಾಡಿದ ಹಂತಕರಾದ ಗೌಸ್ ಮಹಮ್ಮದ್ ಮತ್ತು ರಿಯಾಜ್ ಅಖ್ತರ್ ನಗರದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಅವರನ್ನು ಬೆನ್ನಟ್ಟಿ ಹಿಡಿದ ವಿಡಿಯೋ ದೊರೆತಿದೆ.
ಟೈಲರ್ ಕನ್ಹಯ್ಯಾ ಲಾಲ್ರನ್ನು ಹರಿತವಾದ ಕತ್ತಿಯಿಂದ ಶಿರಚ್ಛೇದಿಸಿದ ಬಳಿಕ, ಪ್ರಧಾನಿ ಮೋದಿಯನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ವಿಡಿಯೋ ಹರಿಬಿಟ್ಟ ಹಂತಕರು, ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದಾಗ ಬೈಕ್ ಮೇಲೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಉದಯಪುರ ಹೊರವಲಯದ ಹೆದ್ದಾರಿಯಲ್ಲಿ ಹೆಲ್ಮೆಟ್ ಧರಿಸಿ ವೇಗವಾಗಿ ಹೋಗುತ್ತಿದ್ದ ಬೈಕ್ ಅನ್ನು ಚೆಕ್ಪೋಸ್ಟ್ನಲ್ಲಿ ಕಣ್ಗಾವಲು ಕಾಯುತ್ತಿದ್ದ ಪೊಲೀಸರು ತಡೆಯಲು ಮುಂದಾದಾಗ, ನಿಲ್ಲಿಸದೇ ಅತಿವೇಗವಾಗಿ ಹೋಗಿದ್ದಾರೆ. ತಕ್ಷಣವೇ ಪೊಲೀಸ್ ತಂಡ ಅವರನ್ನು ಪೊಲೀಸ್ ವಾಹನದಲ್ಲಿ ಬೆನ್ನಟ್ಟಿ ಹೋಗಿ ಹಿಡಿದಿದೆ. ಇದನ್ನು ಯಾರೋ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಕಾಂಗ್ರೆಸ್ನ ನಿತಿನ್ ಅಗರವಾಲ್ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
ಉದಯಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಬಳಿಕ ಪೊಲೀಸರು ಹಂತಕರ ಪತ್ತೆಗೆ ಬಲೆ ಬೀಸಿದ್ದರು. ಇದನ್ನರಿತ ಹಂತಕರು ಉದಯಪುರ ಹೆದ್ದಾರಿಯಲ್ಲಿ ಬೈಕ್ ಮೇಲೆ ತಪ್ಪಿಸಿಕೊಳ್ಳುತ್ತಿದ್ದಾಗ ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ ಎಂದು ರಾಜ್‌ಸಮಂದ್ ಪೊಲೀಸ್ ಮುಖ್ಯಸ್ಥ ಸುಧೀರ್ ಚೌಧರಿ ತಿಳಿಸಿದ್ದಾರೆ.
ಪರಿಹಾರ ಘೋಷಣೆ:ಹತ್ಯೆಯಾದ ದರ್ಜಿ ಕನ್ಹಯ್ಯಾ ಲಾಲ್ ಕುಟುಂಬಕ್ಕೆ ರಾಜಸ್ಥಾನ ಸರ್ಕಾರ 31 ಲಕ್ಷ ರೂಪಾಯಿ ಪರಿಹಾರ ಮತ್ತು ಇಬ್ಬರು ಪುತ್ರರಿಗೆ ಸರ್ಕಾರಿ ಉದ್ಯೋಗ ಘೋಷಿಸಿದೆ.
ತನಿಖೆ ಎನ್ಐಎ ಹೆಗಲಿಗೆ:ಉದಯಪುರದಲ್ಲಿ ದರ್ಜಿಯ ಹತ್ಯೆಯ ಹಿಂದೆ ಭಯೋತ್ಪಾದಕರ ನಂಟು ಇದೆಯೇ ಎಂಬುದನ್ನು ಪತ್ತೆ ಮಾಡಲು ಕೇಂದ್ರ ಗೃಹ ಸಚಿವಾಲಯ ಎನ್ಐಎಗೆ ಸೂಚಿಸಿದೆ. ಅಲ್ಲದೇ, ಪ್ರಕರಣದ ಪೂರ್ಣ ತನಿಖೆಯ ಜವಾಬ್ದಾರಿಯನ್ನು ಎನ್ಐಎಗೆ ವಹಿಸಿದೆ.
ಬಳಿಕ ತನಿಖೆ ಕೈಗೆತ್ತಿಕೊಂಡ ಎನ್‌ಐಎ ಪ್ರಕರಣ ದಾಖಲಿಸಿಕೊಂಡು ಇದು ರಾಷ್ಟ್ರೀಯ ಭದ್ರತೆಗೆ ಹಾಕಲಾದ ಬೆದರಿಕೆ ಎಂದು ಪರಿಗಣಿಸಿ ತೀವ್ರ ತನಿಖೆಗೆ ಮುಂದಾಗಿದೆ. ಪ್ರಕರಣದ ಹಿಂದೆ ಯಾವುದೇ ಸಂಘಟನೆ ಮತ್ತು ಅಂತಾರಾಷ್ಟ್ರೀಯ ಸಂಪರ್ಕ ಇರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರ ಹಿಂದೆ ಭಯೋತ್ಪಾದಕ ಗುಂಪುಗಳು ಇರಬಹುದೆಂದು ಶಂಕಿಸಲಾಗಿದೆ. ಆರೋಪಿಗಳು ಭಯೋತ್ಪಾದಕರ ಗುಂಪಿನೊಂದಿಗೆ ಸಂಪರ್ಕದಲ್ಲಿರಬಹುದು. ಇದನ್ನು ಖಚಿತಪಡಿಸಿಕೊಳ್ಳಲು, ಎನ್ಐಎ ತಂಡವು ಉದಯಪುರದಲ್ಲಿ ತನಿಖೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಅಧಿಕಾರಿಗಳಿಗೆ ಬಡ್ತಿ:ಹತ್ಯೆಕೋರರನ್ನು ಬೆನ್ನಟ್ಟಿ ಹಿಡಿದ ಪೊಲೀಸರಿಗೆ ರಾಜಸ್ಥಾನ ಸರ್ಕಾರ ಬಡ್ತಿ ನೀಡಿದೆ. ತೇಜ್‌ಪಾಲ್, ನರೇಂದ್ರ, ಶೌಕತ್, ವಿಕಾಸ್ ಮತ್ತು ಗೌತಮ್ ಎಂಬ ಐವರು ಪೊಲೀಸರಿಗೆ ಬಡ್ತಿ ನೀಡಿದ ಬಗ್ಗೆ ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
'ಇಸ್ಲಾಂ ಧರ್ಮಕ್ಕೆ ವಿರುದ್ಧ':ಭೀಕರಹತ್ಯಾ ಘಟನೆಯನ್ನು ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಖಂಡಿಸಿದ್ದಾರೆ. ಉದಯಪುರದ ಶಿರಚ್ಛೇದನ ಘಟನೆಯ ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ. ಇದೊಂದು ಅಮಾನವೀಯ ಮತ್ತು ಕಾನೂನುಬಾಹಿರವಾಗಿದೆ. ಘಟನೆಯನ್ನೂ ಇಡೀ ಮುಸ್ಲಿಂ ಸಮುದಾಯ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬೈಕಲ್ಲಿ ನಿಯಮ ಮೀರಿ ರೀಲ್ಸ್ ಮಾಡಿದ್ದಕ್ಕೆ ದಂಡ.. ಫೈನ್ ಕಟ್ಟಿದ್ದನ್ನು ತಿಳಿಸೋಕೆ ಮತ್ತೊಂದು ರೀಲ್ಸ್ ಮಾಡಿದ ಭೂಪ!